ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದವನ ಮೇಲೆ ಪೇದೆ ಹಲ್ಲೆ

ಬಾಗಲಕೋಟೆ: ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿಗೆ ರೈಲ್ವೆ ಪೇದೆ ಹಲ್ಲೆ ಮಾಡಿದ ಘಟನೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ರಾಘವೇಂದ್ರ ಗೋಕಾಕ್ ಎಂಬ ವ್ಯಕ್ತಿ ಮೇಲೆ ಅರುಣಕುಮಾರ್​​​ ಎಂಬ ಪೊಲೀಸ್ ಹಲ್ಲೆ ಮಾಡಿದ್ದಾನೆ. ಈ ವೇಳೆ ರಾಘವೇಂದ್ರನ ಮೊಣಕೈಗೆ ಗಾಯವಾಗಿದೆ. ಕೂಡಲೇ ಆಂಬುಲೆನ್ಸ್ ಕರೆಯಿಸಿ ಆತನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ರಾಘವೇಂದ್ರ ಗದಗ ಮೂಲದವರಾಗಿದ್ದು, ಪತ್ನಿ ಬೇಗಂ ಮತ್ತು ಮಗಳ ಜೊತೆ ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದರು ಎನ್ನಲಾಗಿದ್ದು, ಟಿಕೆಟ್ ತೆಗೆದುಕೊಂಡಿರಲಿಲ್ಲವಂತೆ. ಆದ್ದರಿಂದ ನಿಲ್ದಾಣದಿಂದ ಎದ್ದು ಹೋಗುವಂತೆ ಪೇದೆ ಅರುಣ ಕುಮಾರ್​​​ ಹೇಳಿದ್ದಾನೆ. ಪೇದೆ ಮಾತು ಕೇಳದಿದ್ದಾಗ ಲಾಠಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಕಂಡ ರೈಲ್ವೆ ನಿಲ್ದಾಣದಲ್ಲಿನ ಇತರೆ ಪ್ರಯಾಣಿಕರು ಪೇದೆ ಅರುಣಕುಮಾರ್​ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ರೈಲ್ವೆ ರಕ್ಷಣಾ ದಳದ ಪಿಎಸ್​​​ಐ ಕೃಷ್ಣಮೂರ್ತಿ ಅವರಿಗೆ ರಾಘವೇಂದ್ರನ ಚಿಕಿತ್ಸೆ ವೆಚ್ಚ ಭರಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ರಾಘವೇಂದ್ರ ಕಳೆದ ಒಂದು ವಾರದಿಂದ ರೈಲ್ವೆ ನಿಲ್ದಾಣದಲ್ಲೇ ಪತ್ನಿ ಮತ್ತು ಮಗಳ ಸಮೇತ ಮಲಗುತ್ತಿದ್ದ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv