ಕೊನೆಯಲ್ಲಿ ಟಿಕೆಟ್​ ಬೇಕೆಂದ ಮಲ್ಲಿಕಾರ್ಜುನ್​.. ದಾವಣಗೆರೆ ಕ್ಷೇತ್ರದ ಕೈ ಅಭ್ಯರ್ಥಿ..!

ಬೆಂಗಳೂರು: ಕೊನೆಗೂ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಫೈನಲ್ ಆಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಕಣಕ್ಕಿಳಿಯಲಿದ್ದಾರೆ. ಈ ಮೊದಲು ಹೈಕಮಾಂಡ್ ಶಾಮನೂರು ಶಿವಶಂಕರಪ್ಪರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಆದರೆ ಶಿವಶಂಕರಪ್ಪ, ಅದನ್ನ ನಯವಾಗಿಯೇ ನಿರಾಕರಿಸಿದ್ದರು. ಅಲ್ಲದೇ, ತಮ್ಮ ಪುತ್ರ ಮಲ್ಲಿಕಾರ್ಜುನ್​ಗೂ ಆಸಕ್ತಿ ಇಲ್ಲ ಎಂದು ಹೇಳಿ‌, ರಾಜ್ಯ ನಾಯಕರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ‌ ಹೆಸರು ಶಿಫಾರಸು ಮಾಡಿದ್ರು. ಮಂಜಪ್ಪನ ಜೊತೆಗೆ ತೇಜಸ್ವಿ ಪಟೇಲ್ ಹೆಸರು ಕೂಡಾ ಚಾಲ್ತಿಗೆ ಬಂದಿತ್ತು. ಈ ಸಂಬಂಧ ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೇಜಸ್ವಿ ಪಟೇಲ್ ಹಾಗೂ ಮಂಜಪ್ಪ ಜೊತೆ ಚರ್ಚೆ ನಡೆಸಿದ್ದರು. ಆದರೆ, ತೇಜಸ್ವಿ ಪಟೇಲ್​ಗೆ ಟಿಕೆಟ್ ಅಂತಿಮವಾಗುತ್ತಿದ್ದಂತೆ ತನಗೇ ಕೊಡಿ ಅಂತಾ ಮಲ್ಲಿಕಾರ್ಜುನ್​ ಕೇಳಿದ್ರಂತೆ. ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿದ ಮಲ್ಲಿಕಾರ್ಜುನ್​ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ರಂತೆ. ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಚರ್ಚೆ ನಡೆಸಿ, ಮಲ್ಲಿಕಾರ್ಜುನರನ್ನ ಕೆಪಿಸಿಸಿಗೆ ಕರೆಸಿಕೊಂಡು ಮಾತನಾಡಿದ ಕೈ ನಾಯಕರು ಎಸ್​.ಎಸ್​ ಮಲ್ಲಿಕಾರ್ಜುನ್​ಗೆ ಟಿಕೆಟ್ ನೀಡಿದ್ದಾರೆ.