ಶ್ರೀಲಂಕಾ ಸರಣಿ ಸ್ಫೋಟ, ಗಾಯಾಳುಗಳಿಗೆ ರಕ್ತದಾನ ಮಾಡಲು ಆಸ್ಪತ್ರೆಗಳ ಮುಂದೆ ಜನಸಾಗರ..!

ಕೊಲಂಬೋ: ಉಗ್ರರು ನಡೆಸಿದ ನರಮೇಧದಿಂದ ನಲುಗಿರುವ ಶ್ರೀಲಂಕಾದಲ್ಲಿ ಈಗ ಸೂತಕದ ಛಾಯೆ ಮಡುಗಟ್ಟಿದೆ. ಚರ್ಚ್​, ಹೋಟೆಲ್​ಗಳ ಮೇಲೆ ಅಟ್ಟಹಾಸ ಮೆರೆದ ಉಗ್ರರು 250ಕ್ಕೂ ಹೆಚ್ಚು ಅಮಾಯಕ ಜೀವಗಳನ್ನ ಬಲಿಪಡೆದಿದ್ದಾರೆ. ಸುಮಾರು 400 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ. ಶ್ರೀಲಂಕಾದಲ್ಲಿ ಗಾಯಳುಗಳ ನರಳಾಟ, ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಈ ನಡುವೆ ಸ್ಫೋಟದಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ರಕ್ತದ ಅವಶ್ಯಕತೆ ಇದೆ. ಗಾಯಾಳುಗಳಿಗೆ ರಕ್ತ ನೀಡಬೇಕಿದ್ದು, ರಕ್ತದಾನಿಗಳು ಬೇಕಾಗಿದ್ದಾರೆ ಅಂತಾ ನ್ಯಾಷನಲ್​ ಬ್ಲಡ್​ ಟ್ರಾನ್ಸ್​ಫರ್​ ಸರ್ವೀಸ್​ ಮನವಿ ಮಾಡಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಭಾನುವಾರ ರಜಾ ದಿನವಾದ ನಿನ್ನೆ ನೂರಾರು ಮಂದಿ ಬಾಂಬ್​ ಸ್ಪೋಟಗೊಂಡ ಪ್ರದೇಶದ ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ರಕ್ತದಾನ ಮಾಡಲು ಜನ ಸಾಲು ಗಟ್ಟಿನಿಂತಿದ್ದ ದೃಶ್ಯ ಕಂಡು ಬಂದಿದೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ರಕ್ತದಾನಿಗಳು ಬೇಕೆಂದು ಹರಿಯಬಿಟ್ಟಿದ್ದನ್ನ ನೋಡಿ ನೂರಾರು ಮಂದಿ ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv