ಶ್ರೀಲಂಕಾ ಸರಣಿ ಸ್ಫೋಟ, 13 ಮಂದಿ ಬಂಧನ

ಶ್ರೀಲಂಕಾದಲ್ಲಿ ನಿನ್ನೆ ನಡೆದ ಸರಣಿ ಬಾಂಬ್​ ಸ್ಫೋಟಕ್ಕೆ ಸಂಬಂಧಿಸಿದಂತೆ ಒಟ್ಟು 13 ಮಂದಿಯನ್ನ ಬಂಧಿಸಲಾಗಿದೆ. ಅಲ್ಲದೇ ಘಟನೆ ನಂತರ ನಿನ್ನೆ ತಡರಾತ್ರಿಯವರೆಗೂ ಹಲವೆಡೆ ಬಾಂಬ್​ ಇರುವ ಬಗ್ಗೆ ವದಂತಿಗಳು ಹಬ್ಬಿದ್ದವು. ಈ ಪೈಕಿ ಮಾಲಾಬೇಯಲ್ಲಿ ಅನುಮಾಸ್ಪದವಾಗಿ ನಿಂತಿದ್ದ ಕಾರೊಂದು ಕಂಡಿದೆ. ಇನ್ನೊಂದೆಡೆ ಬಿಐಎನಲ್ಲಿ ಐಇಡಿ ಬಾಂಬ್​ವೊಂದು ಪತ್ತೆಯಾಗಿದ್ದು ಎಸ್​ಎಲ್​ಎಎಫ್​ನ ಅಧಿಕಾರಿಗಳು ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇನ್ನೊಂದೆಡೆ ಘಟನೆ ನಂತರ ಕೆಲವೆಡೆ ಕೋಮು ಸಂಘರ್ಷ ನಡೆದ ಬಗ್ಗೆಯು ವರದಿಯಾಗಿದೆ. ಉದ್ದಪ್ಪುವಾ ಚಿಲ್ಲಾವ್​ನಲ್ಲಿ ಅನ್ಯಕೋಮಿನ ಪ್ರಾರ್ಥನಾ ಸ್ಥಳಗಳಲ್ಲಿ ಪೆಟ್ರೋಲ್​ ಬಾಂಬ್​ ಎಸೆಯಲಾಗಿದೆ. ಉಳಿದಂತೆ ಇಲ್ಲಿನ ಸಿಸಿಡಿ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೇ ದಾಳಿಕೋರರಿಗೆ ಸ್ಥಳ ಒದಗಿಸಿದ್ದ ಮನೆಯನ್ನು ಸರಿಕ್ಕಾಮುಲ್ಲಾದಲ್ಲಿ ಪೊಲೀಸರು ಸುತ್ತುವರಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೋಶಿಯಲ್​ ಮೀಡಿಯಾ ಸೈಟ್​ಗಳನ್ನ ನಿಯಂತ್ರಣದಲ್ಲಿರಿಸಲು ಇಂಟರ್​ನೆಟ್​ ನಿಷ್ಕ್ರಿಯಗೊಳಿಸಲಾಗಿದೆ.

ಇನ್ನು ಮೃತಪಟ್ಟವರ ಪೈಕಿ ಮೂವರು ಭಾರತ ಮೂಲದವರು ಅಂತಾ ಶ್ರೀಲಂಕಾದ ವಿದೇಶಾಂಗ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಅಲ್ಲದೆ ಈ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಾಹಿತಿ ನೀಡಿದ್ದು,​ ಘಟನೆಯಲ್ಲಿ ಲಕ್ಷ್ಮೀ, ನಾರಾಯಣ್​ ಚಂದ್ರಶೇಖರ್ ಹಾಗೂ ರಮೇಶ್ ಎಂಬುವರು ಮೃತಪಟ್ಟಿದ್ದಾರೆ ಅಂತಾ ಸ್ಪಷ್ಟಪಡಿಸಿದ್ದಾರೆ.

ಮೂವರು ಭಾರತೀಯರಷ್ಟೆ ಅಲ್ಲದೇ ಒಬ್ಬ ಪೋರ್ಚುಗೀಸ್​, ಇಬ್ಬರು ಟರ್ಕೀಶ್​, ಮೂವರು ಬ್ರಿಟಿಷ್​ , ಅಮೇರಿಕಾ ಹಾಗೂ ಇಂಗ್ಲೆಂಡ್​​ ಪೌರತ್ವ ಹೊಂದಿದ ಇಬ್ಬರು ಸಾವನ್ನಪ್ಪಿದ್ದಾರೆ ಅಂತಾ ತಿಳಿಸಿದೆ. ಅಲ್ಲದೇ 25 ಗುರುತು ಪತ್ತೆಯಾಗದ ವಿದೇಶಿಯರ ಮೃತದೇಹಸಿಕ್ಕಿದೆ ಅಂತಾ ಮಾಹಿತಿ ನೀಡಿದೆ. ಮೇಲಾಗಿ 19 ಮಂದಿ ವಿದೇಶಿಗರು ಗಾಯಗೊಂಡಿದ್ದಾರೆ ಎನ್ನಲಾಗಿದೆ.