ಆತ್ಮಹತ್ಯೆಯೋ..? ಕೊಲೆಯೋ..? ಸೈನಿಕ ಶಾಲೆ ವಿದ್ಯಾರ್ಥಿ ಸಾವಿನ ಸುತ್ತ.!

ಅದು ರಾಜ್ಯದಲ್ಲಿರುವ ಎರಡನೇ ಸೈನಿಕ ಶಾಲೆ. ವಿದ್ಯಾರ್ಥಿಗಳಲ್ಲಿ ಸೈನ್ಯದ ಬಗ್ಗೆ ಆಸಕ್ತಿ ಮೂಡಿಸೋದು, ಸೇನಾಧಿಕಾರಿಗಳಾಗಿ ರೂಪುಗೊಳ್ಳೋಕೆ ತರುಣರನ್ನು ಸಿದ್ಧಪಡಿಸುವ ಕಾರ್ಯವನ್ನು ಆ ಶಾಲೆ ಮಾಡುತ್ತಿದೆ. ಆದ್ರೆ ಕಳೆದ ಶುಕ್ರವಾರ ಸಂಜೆ ನಡೆದ ಒಂದು ಘಟನೆ ಪ್ರತಿಷ್ಟಿತ ಶಾಲೆಯ ಮೇಲೆ ಗಂಭೀರ ಆರೋಪ ಕೇಳಿ ಬರುವಂತೆ ಮಾಡಿದೆ.
ನಾವಿಲ್ಲಿ ಹೇಳ್ತಿರೋದು ಕೊಡಗು ಜಿಲ್ಲೆಯ ಸೈನಿಕ ಶಾಲೆ ಬಗ್ಗೆ. ಸೋಮವಾರಪೇಟೆ ತಾಲೂಕು ಕೂಡಿಗೆಯಲ್ಲಿರುವ ಸೈನಿಕ ಶಾಲೆಯಲ್ಲಿ ಶನಿವಾರ ಸಂಜೆ ಸಂಭವಿಸಿದ ವಿಧ್ಯಾರ್ಥಿಯ ಸಾವು. ಚಿಂಗಪ್ಪ(14) ಮೃತ ವಿಧ್ಯಾರ್ಥಿ. ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಚಿಂಗಪ್ಪನ ಹಿನ್ನೆಲೆ..
ಚಿಂಗಪ್ಪ, ಸೈನಿಕ ಶಾಲೆಯಲ್ಲಿ 9ನೇ ತರಗತಿಯ(ಎ ವಿಭಾಗ) ವ್ಯಾಸಂಗ ಮಾಡುತ್ತಿದ್ದ. ಚಿಂಗಪ್ಪನ ತಂದೆ ಪೂವಯ್ಯ ಹಾಕಿ ತರಬೇತುದಾರ. ಕೆಲವು ದಿನಗಳ ಹಿಂದೆ ಅವರು ಕೂಡಾ ಇದೇ ಶಾಲೆಗೆ ಹಾಕಿ ತರಬೇತುದಾರರಾಗಿ ಸೇರಿದ್ದರು.
ತಂದೆ ಪೂವಯ್ಯನ ಆರೋಪ..
ನನ್ನ ಮಗನನ್ನು ಶಾಲೆಯ ಸಿಬ್ಬಂದಿಗಳು ಕೊಲೆ ಮಾಡಿದ್ದಾರೆಂದು ಬಾಲಕನ ತಂದೆ ಪೂವಯ್ಯ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಂಜಪ್ಪ(ಕನ್ನಡ ಶಿಕ್ಷಕ), ಗೋವಿಂದರಾಜು(ಕಂಪ್ಯೂಟರ್ ಶಿಕ್ಷಕ), ಮ್ಯಾಥ್ಯೂ(ಎಒ) ಸೀಮಾ(ಉಪಪ್ರಾಂಶುಪಾಲೆ), ಸುನೀಲ್(ವಾರ್ಡನ್) ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಲೆಯೆಂಬ ಅನುಮಾನಕ್ಕೆ ಕಾರಣಗಳೇನು..?
1. ಶನಿವಾರ ಮಧ್ಯಾಹ್ನ 2 ಗಂಟೆಯಿಂದನೇ ಚಿಂಗಪ್ಪ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದ್ರೂ, ಈ ವಿಚಾರವನ್ನು ಶಾಲೆಯಲ್ಲೇ ಇದ್ದ ಪೂವಯ್ಯನವರಿಗೆ ತಿಳಿಸಿದ್ದು ಸಂಜೆ 6 ಗಂಟೆಗೆ.
2. ಚಿಂಗಪ್ಪನನ್ನು ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್ ಸಿಬ್ಬಂದಿ ಮಾತ್ರ ಇದ್ದರೆ ವಿನಃ, ಶಾಲೆಯ ಪರವಾಗಿ ಬೇರೆ ಯಾರು ಕೂಡಾ ಇರಲಿಲ್ಲ.
3. ಈ ಘಟನೆ ಸಾಕಷ್ಟು ಸುದ್ದಿಯಾಗುತ್ತಿದ್ದರೂ ಶಾಲೆಯ ಆಡಳಿತ ಮಂಡಳಿ ತಮ್ಮ ಪ್ರತಿಕ್ರಿಯೆ ನೀಡದೇ ಇರುವುದು. ಅಲ್ಲದೇ, ಘಟನೆ ನಡೆದ ನಂತರ ಶನಿವಾರ ತಡರಾತ್ರಿವರೆಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದಾಗಲೂ ಶಾಲೆಯ ಪರವಾಗಿ ಯಾರೊಬ್ಬರೂ ಭೇಟಿ ನೀಡಿಲ್ಲ.
ಆತ್ಮಹತ್ಯೆ ಮಾಡಿಕೊಂಡನಾ ಚಿಂಗಪ್ಪ..?
1.ಚಿಂಗಪ್ಪನಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡ ಕಾರಣಕ್ಕೆ ಹೆದರಿ, ತರಗತಿ ಮುಗಿದ ಬಳಿಕ ಕೆಮಿಸ್ಟ್ರಿ ಲ್ಯಾಬ್‍ನಿಂದ ಕೆಮಿಕಲ್ ಕೊಂಡುಹೋಗಿ ವಾಶ್ ರೂಂನಲ್ಲಿ ಸೇವಿಸಿರಬಹುದು.
2.ಮರಣೋತ್ತರ ಪರೀಕ್ಷೆಯಲ್ಲಿ ಚಿಂಗಪ್ಪನ ಮೇಲೆ ದೈಹಿಕವಾಗಿ ಹಲ್ಲೆಯಾಗಿರುವ ಯಾವುದೇ ಗುರುತು ಪತ್ತೆಯಾಗಿಲ್ಲ. ಅಲ್ಲದೇ, ಮೃತ ದೇಹದಲ್ಲಿ ರಾಸಾಯನಿಕ ಅಂಶ ಪತ್ತೆಯಾಗಿದೆ.
ಅಷ್ಟಕ್ಕೂ ಶುಕ್ರವಾರ ನಡೆದ್ದೇನು..?
ಶುಕ್ರವಾರ ಮಧ್ಯಾಹ್ನ ವೇಳೆ ಕಂಪ್ಯೂಟರ್ ಕ್ಲಾಸ್ ‍ವಿದ್ಯಾರ್ಥಿಗಳಿಗೆ ವೈಯಕ್ತಿಕ ಇಮೇಲ್ ಐಡಿ ಕ್ರಿಯೇಟ್ ಮಾಡೋದಕ್ಕೆ ಶಿಕ್ಷಕರು ಹೇಳಿದ್ದಾರೆ. ಈ ವೇಳೆ ಚಿಂಗಪ್ಪ ಬಳಸುತ್ತಿದ್ದ ಕಂಪ್ಯೂಟರ್‍ನಲ್ಲಿ ಅಶ್ಲೀಲ ಚಿತ್ರ ಪ್ಲೇ ಆಗ್ತಿರೋದನ್ನ ಶಿಕ್ಷಕರು ಗಮನಿಸಿದ್ದಾರೆ. ಈ ಬಗ್ಗೆ ಆತನಿಗೆ ಎಚ್ಚರಿಕೆ ನೀಡಿದ ಶಿಕ್ಷಕರು ಕ್ಷಮಾಪಣಾ ಪತ್ರ ಬರೆಸಿಕೊಂಡಿದ್ದಾರಂತೆ. ಇದಾದ ನಂತರದಲ್ಲಿ ಎಲ್ಲರನ್ನು ಊಟಕ್ಕೆ ಕಳುಹಿಸಿದ್ದು, ಆದರೆ, ಚಿಂಗಪ್ಪ ಮಾತ್ರ ತೆರಳಲಿಲ್ಲ. ಮಧ್ಯಾಹ್ನ ಮೂರು ಗಂಟೆಗೆ ರೋಲ್ ಕಾಲ್ ಮಾಡುವಾಗ ಕೂಡಾ ಆತ ಇರಲಿಲ್ಲ. ಹೀಗಾಗಿ ಆತನ ಸ್ನೇಹಿತರನ್ನು ವಿಚಾರಿಸಿದಾಗ ‘ಬಾಸ್ಕೆಟ್ ಬಾಲ್ ಆಡೋಕೆ ಹೋಗೋದಾಗಿ’ ಹೇಳಿದ್ದ ಅಂತ ತಿಳಿಸಿದ್ದಾರೆ. ಇದಾದ ನಂತರ ಸಂಜೆ 6 ಗಂಟೆಗೆ ಸಿನೆಮಾ ವೀಕ್ಷಣೆ ವೇಳೆ ರೋಲ್ ಕಾಲ್ ಮಾಡುವಾಗ ಕೂಡಾ ಆತ ಕಾಣಿಸಿಲ್ಲ.
ಹುಡುಕಾಟ ನಡೆಸಿದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಒಳಗಿಂದ ಲಾಕ್ ಆಗಿದ್ದ ವಾಶ್ ರೂಂ ಒಂದರಲ್ಲಿ ಕುಸಿದುಬಿದ್ದ ಸ್ಥಿತಿಯಲ್ಲಿ ಚಿಂಗಪ್ಪ ಪತ್ತೆಯಾಗಿದ್ದಾನೆ. ತಕ್ಷಣ ಅವನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಂಗಪ್ಪ ಮೃತಪಟ್ಟಿದ್ದ ಎಂದು ಶಾಲೆಯ ಮೂಲಗಳು ತಿಳಿಸಿವೆ.
ಸದ್ಯಕ್ಕೆ ಶಾಲೆ ಸಿಬ್ಬಂದಿ ವಿರುದ್ಧ ಪೋಷಕರು ಗಂಭೀರ ಆರೋಪವನ್ನು ಮಾಡಿದ್ದು, ಈ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸೋದಾಗಿ ಜಿಲ್ಲಾ ಎಸ್ಪಿ ರಾಜೇಂದ್ರಪ್ರಸಾದ್ ಹೇಳಿದ್ದಾರೆ.
ಸ್ಪೆಷಲ್ ರಿಪೋರ್ಟ್ : ಕಿಶೋರ್ ರೈ ಕತ್ತಲೆಕಾಡು.