ದಾವಣಗೆರೆಯಲ್ಲೊಂದು ಜಂಬೂ ಸವಾರಿ, ಇವರ ಮನೆಯೇ ಮೈಸೂರು..!

ದಾವಣಗೆರೆ: ವಿನೋಭನಗರದ ಚಂದ್ರಿಕಾ ನಾಗರಾಜ್ ಎಂಬುವವರ ಮನೆಯಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇದನ್ನು ನೋಡಲು ಜನಸಾಗರವೇ ಹರಿದುಬರುತ್ತದೆ. ದಸರಾ ಅಂಗವಾಗಿ ವಿಶೇಷ ಗೊಂಬೆಗಳನ್ನು ಕೂರಿಸುವುದೇ ಇಲ್ಲಿನ ಒಂದು ವಿಶಿಷ್ಟ ಸೊಬಗು.
ಚಂದ್ರಿಕಾ ನಾಗರಾಜ್​ರ ಮನೆಯಲ್ಲಿ ಕೂರಿಸಿರುವ ಐತಿಹಾಸಿಕ ಪ್ರಸಿದ್ಧ ಗೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಇದೇ ಕಾರಣಕ್ಕೆ ಚಂದ್ರಿಕಾರ ಮನೆಗೆ ದಾವಣಗೆರೆಯ ಗೊಂಬೆ ಮನೆ ಅಂತಲೂ ಕರೆಯುತ್ತಾರೆ. ಅಷ್ಟೇ ಅಲ್ಲ ದಸರಾ ದಿನದಂದು ನೋಡುಗರು ಬಂದು ಈ ಮನೆಯಲ್ಲಿರುವ ಗೊಂಬೆಗಳನ್ನು ನೋಡುತ್ತಾರೆ.
ಪ್ರತಿವರ್ಷವು ಗೊಂಬೆಗಳನ್ನು ಕೂರಿಸುವ ಪದ್ಧತಿ ರೂಢಿಸಿಕೊಂಡು ಬಂದಿರುವ ಚಂದ್ರಿಕಾ, ಏನೇ ತೊಂದರೆ ಬಂದರೂ ಗೊಂಬೆಗಳ ಪ್ರತಿಷ್ಠಾಪನೆ ಮಾಡುವುದನ್ನು ಮಾತ್ರ ಬಿಡುವುದಿಲ್ಲ. ಈ ಬಾರಿ ಕೃಷ್ಣ- ಕುಚೇಲ, ಭಕ್ತ ಪ್ರಹ್ಲಾದ, ತಿರುಪತಿ ದರ್ಶನ ಸೇರಿದಂತೆ ವಿವಿಧ ಆಕೃತಿಯ ಗೊಂಬೆಗಳನ್ನು ಪ್ರತಿಷ್ಠಾಪಿಸಿದ್ದಾರೆ. ಇಲ್ಲಿನ ಮಕ್ಕಳಿಗಂತೂ ಗೊಂಬೆಗಳನ್ನು ನೋಡುವುದೇ ಒಂದು ಸಂತಸ. ಐತಿಹಾಸಿಕ, ಪುರಾಣಿಕ ಕಥೆಗಳನ್ನು ಬಿಂಬಿಸುವಂತೆ ಗೊಂಬೆಗಳನ್ನು ಕೂರಿಸುತ್ತಾರೆ. ಇದನ್ನು ನೋಡುವುದೇ ಒಂದು ವಿಶೇಷ ಅನ್ನುತ್ತಾರೆ ಸ್ಥಳೀಯರು.
ದಸರಾ ಹಬ್ಬ ಎಲ್ಲೆಡೆ ಕಳೆಕಟ್ಟಿದ್ದು ಬೆಣ್ಣೆನಗರಿ ದಾವಣಗೆರೆಯ ಚಂದ್ರಿಕಾ ನಾಗರಾಜ್​ರವರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಗೊಂಬೆಗಳು ಮತ್ತಷ್ಟು ಮೆರಗು ನೀಡಿವೆ. ಗೊಂಬೆ ಮನೆ ನೋಡಲು ಮೈಸೂರಿಗೆ ಹೋಗಲು ಸಾಧ್ಯವಾಗದವರು ಇಲ್ಲಿಯೆ ಚಂದ್ರಿಕಾರವರ ಮನೆಯಲ್ಲಿರುವ ಗೊಂಬೆ ದರ್ಶನ ಮಾಡುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv