ಸಾವಿಗೆ ಭಯ ಪಡಲ್ಲ, ಆದ್ರೆ ಆರೋಪಕ್ಕೆ ಭಯ ಪಡ್ತೀನಿ: ಸ್ಪೀಕರ್ ರಮೇಶ್​ ಕುಮಾರ್

ಬೆಂಗಳೂರು: ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿರೋ ಆಡಿಯೋದಲ್ಲಿ ಸ್ಪೀಕರ್​ ರಮೇಶ್ ಕುಮಾರ್ ಅವರ ಹೆಸರನ್ನ ಎಳೆದು ತರಲಾಗಿದೆ ಅನ್ನೋ ವಿಚಾರ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಕಲಾಪ ಆರಂಭ ಆಗುತ್ತಿದ್ದಂತೆ ಅಪರೇಷನ್ ಆಡಿಯೋದ ಬಗ್ಗೆ ಪ್ರಸ್ತಾಪ ಮಾಡಿದ ಸ್ಪೀಕರ್ ರಮೇಶ್​ ಕುಮಾರ್, ಆಡಿಯೋ ರಿಲೀಸ್​ ಆದ ದಿನದಿಂದ ನಾನು ನೊಂದಿದ್ದೇನೆ. ಅದೇ ಸ್ಥಿತಿಯಲ್ಲೇ ನಾನು ಎರಡು ರಾತ್ರಿ ಕಳೆದಿದ್ದೇನೆ. ನನ್ನ ಮನಸ್ಥಿತಿಯನ್ನೇ ನೀವೇ ಊಹಿಸಿಕೊಳ್ಳಿ ಎಂದರು.

ಆಡಿಯೋದಲ್ಲಿ ಏನೇನು ಆಪಾದನೆಗಳು ಒಳಗೊಂಡಿವೆ? ಇಂದು ನಾವು ಎಲ್ಲಿಗೆ ಬಂದು ತಲುಪಿದ್ದೇವೆ..? ಸತ್ಯ ಸಾಬೀತಾಗಲೇ ಬೇಕು. ಯಾರು ಇರಬಹುದು ಮಾತನಾಡಿರುವವರು ಅನ್ನೋದು ನನಗಿನ್ನೂ ಗೊತ್ತಿಲ್ಲ. ತನಿಖೆ ಮೂಲಕ ಮಾತನಾಡಿರುವವರು ಯಾರು ಎಂದು ಸಾಬೀತಾದ್ರೆ. ಅವು ನನನ್ನ ಸಂಪರ್ಕಿಸಿದ್ರಾ? ನನ್ನ ಕುಟುಂಬಸ್ಥರ ಜೊತೆ ಮಾತನಾಡಿದ್ರಾ? 50 ಕೋಟಿ ಹಣ ಎಲ್ಲಿ ಕೊಟ್ಟರು? ಎಷ್ಟು ಕೊಟ್ರು. ಯಾವಾಗ ಕೊಟ್ರು? ನಾನು ಸಾವಿಗೆ ಭಯ ಪಡಲ್ಲ, ಆದ್ರೆ ಆರೋಪಕ್ಕೆ ಭಯ ಪಡ್ತೀನಿ ಅಂತಾ ಹೇಳಿದರು.

ನಾನು ದೊಮ್ಮಲೂರಿನಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಸರ್ಕಾರಿ ಬಂಗಲೆ ತಗೆದುಕೊಂಡಿಲ್ಲ. ಒಂದು ಬೋರ್ಡ್​ ಸಹ ಹಾಕಿಲ್ಲ. ಸಾರ್ವಜನಿಕರಿಗೆ ತೊಂದರೆ ಯಾಗುತ್ತೆ ಅಂತಾ ಬೋರ್ಡ್​ ಹಾಕಿಲ್ಲ. ಅಷ್ಟೊಂದು ಸಣ್ಣ ಮನೆಯಲ್ಲಿ ಹಣ ಎಲ್ಲಿಡಲಿ. ಇಷ್ಟೊಂದು ಹಣ ಇಡಲು ಜಾಗ ಬೇಕಲ್ವಾ? ನನಗ್ಯಾಕೆ ಈ ಶಿಕ್ಷೆ..? ನನಗೆ ಸಾವು ಇಂದೇ ಬರುತ್ತೆ ಅಂದ್ರೆ ಭಯ ಪಡಲ್ಲ ಅಂತಾ ಹೇಳಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಕೃಷ್ಣಭೈರೇಗೌಡ, ನೀವು ಸಭಾಧ್ಯಕ್ಷರಾಗಿದ್ದೀರಿ, ಇಲ್ಲಿ ನಿಮ್ಮ ನೋವನ್ನು ತೋಡಿಕೊಂಡಿದ್ದೀರಿ. ಆಡಿಯೋ ನಿಮ್ಮ ವೈಯಕ್ತಿಕ ಅಲ್ಲ ಸದನಕ್ಕೆ ಸಂಬಂಧ ಪಟ್ಟಿದ್ದು ಅಂತಾ ಮಾತು ಮುಂದುವರಿಸಿದರು.