ಅಪಾಯದ ಅಂಚಿನಲ್ಲಿ ಸೋಮಾವತಿ ತೂಗು ಸೇತುವೆ..!

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲ್ಲೋಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಮುರಿದು ಬೀಳುವ ಸೂಚನೆ ನೀಡುತ್ತಿದೆ. ಸೋಮಾವತಿ ನದಿಗೆ ಅಡ್ಡದಾಗಿ ಕಟ್ಟಿರುವ ಸೇತುವೆ ಅಪಾಯ ಸೂಚಿಸುತ್ತಿದ್ದು, ಗ್ರಾಮಸ್ಥರು ಜೀವಭಯದಲ್ಲೇ ಓಡಾಡುತ್ತಿದ್ದಾರೆ.
ಆದಿವಾಸಿಗಳು ವಾಸವಾಗಿರುವ ಈ ಗ್ರಾಮಕ್ಕೆ ತೂಗು ಸೇತೆವೆಯೇ ಸಂಪರ್ಕ ಕೊಂಡಿ. ಅಲ್ಲಿನ ನಿವಾಸಿಗಳೆಲ್ಲಾ ಸೇರಿಕೊಂಡು ತೂಗು ಸೇತುವೆಯನ್ನ ನಿರ್ಮಾಣ ಮಾಡಿಕೊಂಡಿದ್ದರು. ಆದರೆ ಅದೀಗ ಯಾವ ಕ್ಷಣದಲ್ಲಾದರೂ ಮುರಿದು ಬೀಳುವ ಸಂಭವ ಇದೆ. ಇನ್ನು ಕಳೆದ ಕೆಲ ದಿನಗಳಿಂದ ಮಳೆ ವಿಪರೀತವಾಗಿ ಸುರಿಯುತ್ತಿರೋದ್ರಿಂದ ಸೋಮಾವತಿ ನದಿ ಕೂಡ ತುಂಬಿ ಹರಿಯುತ್ತಿದೆ. ಹೀಗಾಗಿ ಅಲ್ಲಿನ ನಿವಾಸಿಗಳು ಮತ್ತಷ್ಟು ಭಯಭೀತರಾಗಿದ್ದಾರೆ.
ಇನ್ನು, ಸಂಸೆ ಗ್ರಾಮ ಪಂಚಾಯ್ತಿಗೆ ಸೇತುವೆ ಬೇಕು ಅಂತಾ ಗ್ರಾಮಸ್ಥರು ಅನೇಕ ಮಾಡಿ ಮನವಿ ಮಾಡಿದ್ದರಂತೆ. ಆದ್ರೆ ಪಂಚಾಯತ್ ಅಧಿಕಾರಿಗಳು ಮಾತ್ರ ಇದುವರೆಗೂ ತಲೆಕೆಡಿಸಿಕೊಂಡಿಲ್ಲ ಅಂತಾ ಆರೋಪಿಸಿದ್ದಾರೆ. ಗ್ರಾಮದಲ್ಲಿ ಸುಮಾರು 15 ಕುಟುಂಬಗಳು ವಾಸವಿದ್ದು, ಜೀವ ಭಯದಿಂದ ಮಕ್ಕಳು ಹಾಗೂ ಗ್ರಾಮಸ್ಥರು ಸೇತುವೆ ಮೇಲೆ ಓಡಾಡುವಂತಾಗಿದೆ. ಅಲ್ಲದೇ ಹಲವು ವರ್ಷಗಳಿಂದ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲ, ಶಾಸಕರು ಹಾಗೂ ಅಧಿಕಾರಿಗಳಿಗೆ ಅರ್ಜಿ ನೀಡಿದ್ದರೂ ಯಾವುದೇ ಪ್ರಯೋಜನವಿಲ್ಲ ಎನ್ನತ್ತಾರೆ ಗ್ರಾಮಸ್ಥರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv