ಮತದಾನದ ಹಕ್ಕು ಚಲಾಯಿಸಿದ ಸಿಯಾಚಿನ್​ ಸೈನಿಕರು

ಶ್ರೀನಗರ, ಜಮ್ಮು-ಕಾಶ್ಮೀರ: ವಿಶ್ವದ ಅತೀ ಎತ್ತರದ ವಾರ್​ ಫೀಲ್ಡ್​ ಅಂತಲೇ ಕರೆಯಲಾಗುವ ಸಿಯಾಚಿನ್​ನಲ್ಲಿ ಯೋಧರು ನಿನ್ನೆ ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗ ನೀಡಿದ ಸೇವೆಯಂತೆ​ ಮೊದಲ ಹಂತದ ಚುನಾವಣೆಗೆ ಸಿಯಾಚಿನ್ ಸೈನಿಕರು ಬ್ಯಾಲೆಟ್​ ಪೇಪರ್​ ಮೂಲಕ ವೋಟ್​ ಮಾಡಿದರು. ಅತೀ ಸೂಕ್ಷ್ಮ ಹಾಗೂ ತುಂಬ ಎತ್ತರದ ಯುದ್ಧ ಭೂಮಿ ಇದಾಗಿರುವುದರಿಂದ ಇಲ್ಲಿ ಸೇವೆ ನಿರ್ವಹಿಸುತ್ತಿರುವ ಸೈನಿಕರಿಗೆ, ಕೇಂದ್ರ ಚುನಾವಣಾ ಆಯೋಗ ಈ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಅದರಂತೆ ಯೋಧರು ಕರ್ತ್ಯವ್ಯಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವ ಸ್ಥಳದಿಂದಲೇ ತಮ್ಮ ಕ್ಷೇತ್ರದ ಪರ ಮತದಾನ ಮಾಡಿದರು. ಯೋಧರೆಲ್ಲರೂ ಆನ್​ಲೈನ್​ ಬ್ಯಾಲೆಟ್​​ ಪೇಪರ್​ ಮೂಲಕ ಸಿಯಾಚಿನ್​ ಸೇರಿದಂತೆ ಎಲ್​ಒಸಿಯ ವಿವಿಧ ಸೇನಾ ಕ್ಯಾಂಪ್​ಗಳಲ್ಲಿ ಮತ ಚಲಾಯಿಸಿದರು. ಯೋಧರಿಗಾಗಿ ಚುನಾವಣಾ ಆಯೋಗ ಆನ್​ಲೈನ್​ನಲ್ಲಿ ವಿಶೇಷ ಬ್ಯಾಲೆಟ್​ ಪೇಪರ್​ ಅಪ್​ಲೋಡ್​ ಮಾಡಿತ್ತು. ಈ ಬ್ಯಾಲೆಟ್​​ ಪೇಪರ್​​ಗಳನ್ನು ತಾವಿರುವ ಸ್ಥಳದಿಂದಲೇ ಇಂಟರ್ನೆಟ್​​ ಮೂಲಕ ಡೌನ್​ಲೋಡ್​ ಮಾಡಿಕೊಂಡು, ತಮಗೆ ಬೇಕಾದ ಅಭ್ಯರ್ಥಿಗೆ ಮತ ಹಾಕಿ ಆ ಬ್ಯಾಲೆಟ್​ ಪೇಪರ್​ಗಳನ್ನು ಸಮೀಪದ ಆರ್ಮಿ ಕ್ಯಾಂಪ್​ನಲ್ಲಿನ ಕಲೆಕ್ಟಿಂಗ್ ಪಾಯಿಂಟ್​​ಗಳಿಗೆ ತಲುಪಿಸಿದರು. ಈ ಮೂಲಕ ಸೇವೆ ಮಾಡುವ ಸ್ಥಳದಿಂದಲೇ ಸೈನಿಕರು ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು.