ನಗರಸಭೆಯ ಸೋಲಾರ್ ಲೈಟ್ ಪ್ಲ್ಯಾನ್ ಫ್ಲಾಪ್ !

ರಾಯಚೂರು: ನಗರಸಭೆ ಒಂದಿಲ್ಲೊಂದು ರೀತಿಯಲ್ಲಿ ಆಗಾಗ ಸುದ್ದಿ ಆಗ್ತಾನೆ ಇರುತ್ತೆ. ಅದರಲ್ಲೂ ಯೋಜನೆಗಳ ಪ್ಲ್ಯಾನ್ ಮಾಡೋದರಲ್ಲಿ ಏಷ್ಟು ಕಾಳಜಿ ವಹಿಸುತ್ತೋ, ಅಷ್ಟು ಕಾಳಜಿ ಅನುಷ್ಠಾನ ಮಾಡೋದರಲ್ಲಿ ವಹಿಸಲ್ಲ, ಹಾಗಾಗಿಯೇ ನಗರಸಭೆ ಕೈಗೊಳ್ಳುವ ಬಹುತೇಕ ಜನಪರ ಕೆಲಸಗಳು ಹಳ್ಳ ಹಿಡಿಯುತ್ತಿವೆ. ಇಂತಹ ಲಿಸ್ಟ್ ಗೆ ಸೋಲಾರ್ ಲೈಟ್ ಪ್ಲ್ಯಾನ್ ಕೂಡ ಸೇರಿಕೊಂಡಿದೆ.
ರಾಯಚೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ, ಐತಿಹಾಸಿಕ ಕೋಟೆಯ ಮಕ್ಕ ದರ್ವಾಜಾದಲ್ಲಿ ಸಾರ್ವಜನಿಕರು ದಿನನಿತ್ಯ ವಾಕಿಂಗ್ ಮಾಡೋದಕ್ಕೆ ಹೋಗ್ತಿದ್ರು, ಅದರಲ್ಲೂ ಹಿರಿಯರು ಹೆಚ್ಚಾಗಿ ವಾಯು ವಿಹಾರಕ್ಕೆ ತೆರಳುತ್ತಿದ್ರು. ಕೋಟೆಯ ಆವರಣದಲ್ಲಿ ವಿದ್ಯುತ್ ದೀಪಗಳಿಲ್ಲದ ಕಾರಣ ಸಂಜೆ ಹೊತ್ತಲ್ಲಿ ವಾಯು ವಿಹಾರಕ್ಕೆ ಹೋಗುವವರಿಗೆ ತೊಂದರೆ ಆಗುತ್ತಿತ್ತು. ವಾಯು ವಿಹಾರಿಗಳ ಅನುಕೂಲಕ್ಕಾಗಿ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಲು ಪ್ಲ್ಯಾನ್ ಮಾಡಿಕೊಂಡು, 13ನೇ ಫೈನನ್ಸ್ ನಲ್ಲಿ₹ 35.50ಲಕ್ಷ ಖರ್ಚು ಮಾಡಿ ೬೮ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು . ಪ್ರತಿಯೊಂದು ಸೋಲಾರ್ ಲೈಟ್ ಗೆ ಸುಮಾರು 35 ಸಾವಿರ ಖರ್ಚು ಮಾಡಲಾಗಿದೆ. ಸೋಲಾರ್ ಲೈಟ್ಸ್ ಅಳವಡಿಸಿದ ಆರು ತಿಂಗಳಲ್ಲೆ ಬಹುತೇಕ ಲ್ಯಾಂಪ್‌ಗಳು ಉರಿಯದೆ ಹಾಳಾಗಿವೆ, ಅದನ್ನು ದುರಸ್ತಿ ಮಾಡುವ ಗೋಜಿಗೆ ನಗರಸಭೆ ಹೋಗಿಲ್ಲ.
ಅಷ್ಟೇ ಯಾಕೆ ಕೋಟೆ ಆವರಣಕ್ಕೆ ತೆರಳುವ ಗೇಟ್ ಗೇ ಬೀಗ ಹಾಕಲಾಗಿದೆ. ಇದರಿಂದ ಯಾರೂ ಕೂಡ ವಾಯು ವಿಹಾರಕ್ಕೆ ತೆರಳದಂತಾಗಿದೆ. ಇಷ್ಟೊಂದು ಹಣ ಖರ್ಚು ಮಾಡಿ ನಗರಸಭೆ, ಸೋಲಾರ್ ಲ್ಯಾಂಪ್ ಅಳವಡಿಸಿದ್ದಾದ್ರು, ಯಾಕೆ ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಸದ್ಯ ಸಾರ್ವಜನಿಕರ ತೆರಿಗೆಯ ಲಕ್ಷ ಲಕ್ಷ ಹಣ ಖರ್ಚು ಮಾಡಿ ಅಳವಡಿಸಿರುವ ಸೋಲಾರ್ ಲ್ಯಾಂಪ್‌ಗಳು ನಿರುಪಯುಕ್ತವಾದಂತಾಗಿವೆ. ಒಟ್ಟಿನಲ್ಲಿ ರಾಯಚೂರು ನಗರಸಭೆ, ಯೋಜನೆಗಳ ಪ್ಲ್ಯಾನ್ ಮಾಡುವಲ್ಲಿ ತೋರುವ ಕಾಳಜಿ, ಅದನ್ನು ಸರಿಯಾಗಿ ನಿರ್ವಹಣೆ ಮಾಡಿ ಜನರಿಗೆ ಅನುಕೂಲ ಆಗುವಂತೆ ಮಾಡುವುದಿಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆದಂತಾಗಿದೆ. ಹಾಳಾಗಿರುವ ಸೋಲಾರ್ ಲ್ಯಾಂಪ್ ಗಳನ್ನು ದುರಸ್ತಿ ಮಾಡಿ, ಕೋಟೆಯ ಎಂಟ್ರೇನ್ಸ್ ಗೇಟ್ ಬೀಗ ತೆಗೆದು ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಅನುಕೂಲ ಮಾಡಬೇಕಾಗಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಬಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv