ಸಚಿವೆ ಸ್ಮೃತಿ ಇರಾನಿ ಡಿಗ್ರಿ ಮಾಡಿಯೇ ಇಲ್ಲ..!

ಅಮೇಥಿ: (ಉತ್ತರ ಪ್ರದೇಶ) ರಾಹುಲ್​ ಗಾಂಧಿ ವಿರುದ್ಧ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ನಿನ್ನೆ ಉತ್ತರ ಪ್ರದೇಶದ ಅಮೇಥಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಬಾರಿಯ ಚುನಾವಣೆ ನಡೆದಾಗಿನಿಂದಲೂ ಭಾರೀ ಚರ್ಚೆಗೆ ಕಾರಣವಾಗಿದ್ದು, ಸ್ಮೃತಿ ಇರಾನಿ ಅವರ ಶಿಕ್ಷಣದ ವಿಚಾರ. ಇದೀಗ ಸ್ಮೃತಿ ಇರಾನಿ ಅವರ ಪದವಿ ಪೂರ್ಣಗೊಂಡಿಲ್ಲ ಅನ್ನೋದು ಖಾತ್ರಿಯಾಗಿದೆ.
ನಿನ್ನೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡಿವಿಟ್​​ನಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಹೈಯರ್​ ಎಜ್ಯುಕೇಷನ್​ ಕಾಲಂನಲ್ಲಿ ದೆಹಲಿ ಮುಕ್ತ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಪದವಿ ಭಾಗ -1 ಅಂತ ತುಂಬಿದ್ದು, 1994ರಲ್ಲಿ ತಾವು ಪದವಿಗೆ ಸೇರಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ಮೂರು ವರ್ಷದ ತಮ್ಮ ಪದವಿ ಪೂರ್ಣಗೊಂಡಿಲ್ಲ ಎಂದು ನಮೂದಿಸಿದ್ದಾರೆ. 2004ರಲ್ಲಿ ದೆಹಲಿಯ ಚಾಂದಿನಿ ಚೌಕ್​ನಲ್ಲಿ ಕಾಂಗ್ರೆಸ್​ ನಾಯಕ ಕಪಿಲ್​ ಸಿಬಲ್​ ವಿರುದ್ಧ ಸ್ಪರ್ಧಿಸಿದ್ದ ಸ್ಮೃತಿ, 1996ರಲ್ಲಿ ದೆಹಲಿ ಮುಕ್ತ ವಿವಿಯಿಂದ ಬಿಎ ಪದವಿ ಪಡೆದಿರುವುದಾಗಿ ಉಲ್ಲೇಖಿಸಿದ್ದರು. ಆದ್ರೀಗ, ತಮ್ಮ ಶಿಕ್ಷಣದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಇದು ಹೊಸ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇನ್ನು ಇದೇ ಅಫಡಿವಿಟ್​ನಲ್ಲಿ ಸುಮಾರು 4.71 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಸ್ಮೃತಿ ಇರಾನಿ ಘೋಷಿಸಿದ್ದಾರೆ.