ಸ್ಮೋಕ್ ಮಾಡಿದ್ರೆ ಬ್ಯೂಟಿ ಹೊಗೆನೇ..!

ಏಯ್… ಸ್ಮೋಕಿಂಗ್ ಮಾಡಿದ್ರೆ ಕ್ಯಾನ್ಸರ್​ ಬರುತ್ತೆ ಬಿಟ್ಬಿಡು, ಸ್ಮೋಕ್ ಮಾಡಿದ್ರೆ ಲಂಗ್ಸ್​ ಎಷ್ಟರ ಮಟ್ಟಿಗೆ ಹಾಳಾಗುತ್ತೆ ಗೊತ್ತಾ? ಅಯ್ಯೋ ಸ್ಮೋಕ್​ ಮಾಡ್ಬೇಡಿ ಆರೋಗ್ಯಕ್ಕೆ ಒಳ್ಳೇದಲ್ಲ. ಹೀಗೆಲ್ಲಾ ಸಾಕಷ್ಟು ಜನ ಸ್ಮೋಕಿಂಗ್​​ ಮಾಡೋರಿಗೆ ಬುದ್ಧಿವಾದ ಹೇಳ್ತಾನೆ ಇರ್ತಾರೆ. ಆದ್ರೆ ಸ್ಮೋಕ್ ಮಾಡೋರು ಅದನ್ನ ಕೇಳ್ತಾರಾ? ಊಹುಂ. ಬಿಲ್​​ಕುಲ್​​ ಇಲ್ಲ. ಅಷ್ಟು ಸುಲಭವಾಗಿ ಚಟವನ್ನ ಬಿಡೋಕಾಗಲ್ಲ ಅಂತ ಅದನ್ನೇ ಮುಂದುವರೆಸುತ್ತಾರೆ. ಆದ್ರೆ ಪ್ರತಿ ಸಿಗರೆಟ್​ ನಿಮ್ಮ ಮುಖದ ಮೇಲೆ ಕಲೆ ಉಳಿಸುವಂತಿದ್ರೆ ಹೇಗಿರುತ್ತೆ ಊಹಿಸಿಕೊಳ್ಳಿ. ಸ್ಮೋಕಿಂಗ್ ಮಾಡೋದ್ರಿಂದ ನಿಮ್ಮ ಆರೋಗ್ಯದ ಜೊತೆಗೆ ಲುಕ್ಸ್​ ಕೂಡ ಹಾಳಾಗುತ್ತೆ.

ನಿಮ್ಮ ಕಣ್ಣುಗಳಿಗೆ ಹಾನಿ ಮಾಡುತ್ತದೆ.
ಯಾರಾದ್ರೂ ನಿದ್ದೆಗೆಟ್ಟರೆ ಮರುದಿನ ಬೆಳಗ್ಗೆ ಮೂಡ್​ ಚೆನ್ನಾಗಿರಲ್ಲ. ಅಲ್ಲದೆ ಅವರಿಗೆ ಸರಿಯಾಗಿ ನಿದ್ದೆಯಾಗಿಲ್ಲ ಅನ್ನೋದು ಮುಖದ ಮೇಲೂ ಕಾಣುತ್ತಿರುತ್ತದೆ. ನೀವು ಸ್ಮೋಕ್ ಮಾಡ್ತೀರಾ ಅಂದ್ರೆ ನಿದ್ದೆಗೆಟ್ಟಿರುವವರಿಗೆ ಆಗೋ ಆ ಅನುಭವದ ನಾಲ್ಕು ಪಟ್ಟು ನಿಮಗೆ ಆಗುತ್ತದೆ.

ಹಲ್ಲುಗಳು ಹಳದಿಗಟ್ಟುತ್ತವೆ
ಫಳಫಳ ಹೊಳೆಯೋ ಬಿಳಿ ಹಲ್ಲು ನಿಮ್ಮದಾಗಿರಬೇಕು ಅಂತ ಇಷ್ಟಪಡ್ತೀರಾ? ನೀವು ಸ್ಮೋಕ್​​ ಮಾಡೋದಾದ್ರೆ ಆ ಆಸೆಗೆ ಗುಡ್​ಬೈ ಹೇಳಿಬಿಡಿ. ಯಾಕಂದ್ರೆ ಸಿಗರೆಟ್​ನಲ್ಲಿರುವ ನಿಕೋಟಿನ್​​ ನಿಮ್ಮ ಹಲ್ಲಿನ ಮೇಲೆ ಕಲೆ ಮೂಡಿಸುತ್ತದೆ. ಇದರಿಂದ ಸಿಗರೆಟ್​​ಗೆ ಖರ್ಚು ಮಾಡೋ ದುಡ್ಡಿನ ಜೊತೆಗೆ ಟೀತ್​​ ವೈಟ್ನಿಂಗ್​​ಗೂ ನೀವು ಹಣ ಸುರಿಯಬೇಕಾಗುತ್ತೆ.

ಮುಖ ಬೇಗ ಸುಕ್ಕುಗಟ್ಟುತ್ತದೆ
2-3 ಮಕ್ಕಳು ಇರೋರಿಗೂ ಆಂಟಿ, ಅಂಕಲ್ ಅಂತ ಕರೆದ್ರೆ ಇಷ್ಟವಾಗಲ್ಲ. ಇನ್ನು ನೀವು ಯಂಗ್​ ಆಗಿದ್ರೂ ವಯಸ್ಸಾದವರಂತೆ ಕಂಡರೆ ಹೇಗೆ? ಸ್ಮೋಕ್​ ಮಾಡೋದ್ರಿಂದ ಏಜಿಂಗ್​​​ ಬೇಗನೆ ಆಗುತ್ತದೆ ಅಂತ ತಜ್ಞರು ಹೇಳ್ತಾರೆ. ಸ್ಮೋಕಿಂಗ್​ ಮಾಡದವರಿಗೆ ಹೋಲಿಸಿದ್ರೆ ಸ್ಮೋಕ್​ ಮಾಡುವವರು ಸುಮಾರು ಒಂದೂವರೆ ವರ್ಷದಷ್ಟು ಹೆಚ್ಚು ವಯಸ್ಸಾದವರಂತೆ ಕಾಣ್ತಾರೆ. ಚರ್ಮವನ್ನು ಕೋಮಲವಾಗಿ ಹಾಗೂ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಲು ರಕ್ತಪೂರೈಕೆ ತುಂಬಾ ಮುಖ್ಯ. ಆದ್ರೆ ಸ್ಮೋಕಿಂಗ್​ ಇದನ್ನ ತಡೆಯೋದ್ರಿಂದ ಚರ್ಮ ಬೇಗನೆ ಸುಕ್ಕುಗಟ್ಟುತ್ತದೆ.

ಕೂದಲಿಗೂ ಆಗುತ್ತೆ ಡ್ಯಾಮೇಜ್
ಮುಖ ಸುಕ್ಕುಗಟ್ಟೋದಷ್ಟೇ ಅಲ್ಲ, ಸ್ಮೋಕಿಂಗ್ ಮಾಡೋದ್ರಿಂದ ನಿಮ್ಮ ಕೂದಲಿಗೂ ಡ್ಯಾಮೇಜ್ ಆಗುತ್ತೆ. ಸ್ಮೋಕ್​​ನಲ್ಲಿರೋ ವಿಷಕಾರಿ ಕೆಮಿಕಲ್​​​ ನಿಮ್ಮ ಕೂದಲಿನ ಡಿಎನ್​ಎಗೆ ಹಾನಿ ಮಾಡುತ್ತದೆ. ಇದರಿಂದಾಗಿ ಸ್ಮೋಕ್​ ಮಾಡುವವರಿಗೆ ತೆಳುವಾದ ಕೂದಲು ಇರುತ್ತದೆ. ಅಲ್ಲದೆ ಸ್ಮೋಕ್ ಮಾಡದವರಿಗಿಂತ ಸ್ಮೋಕ್​ ಮಾಡುವವರ ಕೂದಲು ಬೇಗನೆ ಬಿಳಿಯಾಗುತ್ತದೆ. ಅಲ್ಲದೆ ಬಾಲ್ಡ್​​ ಆಗೋ ಸಾಧ್ಯತೆಯೂ ಹೆಚ್ಚಿರುತ್ತದೆ.

ಹಲ್ಲು ಉದುರುತ್ತೆ ಹುಷಾರು..!
ಮುಖ ಸುಕ್ಕುಗಟ್ಟಿ, ಕೂದಲು ಉದುರಿ ಬಾಲ್ಡ್​ ಆಗೋದನ್ನೇ ಊಹಿಸಲು ಆಗ್ತಿಲ್ವಾ. ಹಾಗಾದ್ರೆ ಇಲ್ಲಿ ಕೇಳಿ. ಸ್ಮೋಕಿಂಗ್ ಮಾಡೋದ್ರಿಂದ ಸಾಕಷ್ಟು ರೀತಿಯ ಹಲ್ಲಿನ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಓರಲ್​ ಕ್ಯಾನ್ಸರ್​ ಹಾಗೂ ಗಮ್​​ ಡಿಸೀಸ್​ ಕೂಡ ಬರಬಹುದು. ಇದು ಹಲ್ಲು ಉದುರಲು ಕಾರಣವಾಗುತ್ತದೆ.

ಮುಖ ಕಳೆಗುಂದುತ್ತದೆ
ಸಿಗರೆಟ್​​ ಹೊಗೆ ಕಾರ್ಬನ್​ ಮೋನಾಕ್ಸೈಡ್​​ ಹೊಂದಿರುತ್ತದೆ. ಇದು ನಿಮ್ಮ ಮುಖದಲ್ಲಿನ ಆಮ್ಲಜನಕವನ್ನು ಡಿಸ್​​ಪ್ಲೇಸ್​ ಮಾಡುತ್ತದೆ. ಅಲ್ಲದೆ ನಿಕೋಟಿನ್​ನಿಂದ ರಕ್ತಚಲನೆ ಕಡಿಮೆಯಾಗಿ ಮುಖ ಡ್ರೈ ಆಗುತ್ತದೆ. ಸ್ಕಿನ್​ ಡ್ಯಾಮೇಜ್​ನಿಂದ ರಕ್ಷಿಸುವ ವಿಟಮಿನ್​​​-ಸಿ ಮುಂತಾದ ಹಲವಾರು ಪೋಷಕಾಂಶಗಳನ್ನು ಸಿಗರೇಟ್​​ ಸ್ಮೋಕಿಂಗ್​​ ನುಂಗಿಹಾಕುತ್ತದೆ. ಇದರಿಂದ ಮುಖದಲ್ಲಿ ಕಾಂತಿ ಇರುವುದಿಲ್ಲ.

ಇವಷ್ಟೇ ಅಲ್ಲದೆ ಸ್ಮೋಕಿಂಗ್​ನಿಂದ ಸ್ಕಿನ್ ಕ್ಯಾನ್ಸರ್​ ಬರೋ ಸಾಧ್ಯತೆ ಹೆಚ್ಚು. ಜೊತೆಗೆ ಸ್ಟ್ರೆಚ್​ ಮಾರ್ಕ್ಸ್​​ಗೂ ಎಡೆ ಮಾಡಿಕೊಡುತ್ತದೆ. ಸೋ ದಮ್ ಮಾರೋ ದಮ್​ ಅಂತ ಹೊಗೆ ಬಿಡೋ ಮುನ್ನ ನಿಮ್ಮ ಬ್ಯೂಟಿ ಬಗ್ಗೆ ಒಮ್ಮೆ ಚಿಂತಿಸಿ.

ವಿಶೇಷ ಬರಹ: ಪ್ರಕೃತಿ ಸಿಂಹ

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv