ಇನ್ಮುಂದೆ ಪಬ್ಲಿಕ್​ನಲ್ಲಿ ಧೂಮಪಾನ ಮಾಡಿದ್ರೆ ದಂಡ ₹200 ಅಲ್ಲ ₹2000..!?

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಪ್ರಸ್ತುತ ಇರುವ ದಂಡದ ಮೊತ್ತವನ್ನು ₹200 ರೂಪಾಯಿನಿಂದ ₹2000 ಸಾವಿರ ರೂಪಾಯಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲಹೆ ಮಾಡಿದೆ ಅಂತಾ ಬೆಂಗಳೂರು ನಗರ ಜಿಲ್ಲಾ ಕ್ಷಯರೋಗ ಮತ್ತು ತಂಬಾಕು ನಿಯಂತ್ರಣಾಧಿಕಾರಿ ಡಾ. ಜಿ.ಎ.ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‍ನ ಸಹಯೋಗದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತ ಒಂದು ದಿನದ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಕೋಟ್ಪಾ ಎಂದೇ ಕರೆಯಲಾಗುವ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಹಾಗೂ ವಾಣಿಜ್ಯ ಮತ್ತು ವ್ಯಾಪಾರ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ) ನಿಯಂತ್ರಣಾ ಕಾಯ್ದೆ-2003 ಕ್ಕೆ ತಿದ್ದುಪಡಿ ತರಲು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಕಡಿವಾಣ ಹಾಕಲು ಪೂರಕ ವಾತಾವರಣ ಸೃಷ್ಠಿಸುವ ಈ ಪ್ರಸ್ತಾವನೆಯು ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಪರಿಶೀಲನಾ ಹಂತದಲ್ಲಿದೆ ಎಂದರು.

ರೋಸ್ ಡೇ..!
ವಿಶ್ವ ತಂಬಾಕು ರಹಿತ ದಿನವಾದ ಮೇ 31 ರಂದು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ನಾಲ್ಕೂ ತಾಲ್ಲೂಕು ಆಸ್ಪತ್ರೆಗಳಲ್ಲಿ, ಎಲ್ಲಾ ಎಂಟು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಧೂಮಪಾನ ದುಷ್ಪರಿಣಾಮಗಳ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಅಲ್ಲದೇ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಜಾಥಾ ನಡೆಸಲಿದ್ದಾರೆ. ಅಂತೆಯೇ, ಧೂಮಪಾನ ಮಾಡುವವರನ್ನು ಕಂಡಾಗ ಗುಲಾಬಿ ಹೂವು ನೀಡಿ ಧೂಮಪಾನದಿಂದ ದೂರವಿರಿ ಎಂಬ ಸಂದೇಶ ಸಾರಲು ಯೋಜನೆ ರೂಪಿಸಲಾಗಿದೆ ಎಂದರು. ಅಲ್ಲದೇ ಸಿಗರೇಟು ಮತ್ತು ಮತ್ತು ಇತರೆ ತಂಬಾಕು ಪದಾರ್ಥಗಳು ಕೇವಲ ಅವುಗಳನ್ನು ಸೇವಿಸುವ ಜನರ ಮೇಲೆ ಮಾತ್ರವಲ್ಲ ಇತರೆ ಜನಸಾಮಾನ್ಯರ ಮೇಲೂ ಬೀರುತ್ತಿರುವ ದುಷ್ಪರಿಣಾಮಗಳನ್ನು ಒಮ್ಮೆ ಅವಲೋಕಿಸಿದರೆ ಲಾಭಕ್ಕಿಂತಲೂ ನಷ್ಟವೇ ಹೆಚ್ಚು ಎಂಬುದು ಸುಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಆಯುಷ್ಯವನ್ನು ಕಡಿತಗೊಳಿಸುವ ಸಿಗರೇಟು ಮತ್ತು ಇತರೆ ತಂಬಾಕು ಪದಾರ್ಥಗಳ ತಯಾರಿಕಾ ಕಂಪನಿಗಳಿಂದಲೂ ಯಾವುದೇ ಸಾಮುದಾಯಿಕ ಅಭಿವೃದ್ಧಿ ನಿಧಿ ಸ್ವೀಕರಿಸಬಾರದು ಎಂದು ತೀರ್ಮಾನಿಸಲಾಗಿದೆ ಎಂದರು.

ಪರಿಸರದ ಶತ್ರು ತಂಬಾಕು!
ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತ ವಿಶೇಷ ಉಪನ್ಯಾನ ನೀಡಿದ ಜಿಲ್ಲಾ ಆರೋಗ್ಯ ಸಲಹೆಗಾರ ಡಾ. ಎಲ್.ಎಸ್.ಚಂದ್ರಕಿರಣ್ ಮಾತನಾಡಿ, ಭಾರತದಲ್ಲಿ ಅದರಲ್ಲೂ ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ, ತಂಬಾಕು ಬೆಳೆ ಬೆಳೆಯಲಾಗುತ್ತದೆ. ತಂಬಾಕು ಬೆಳೆಗಳಲ್ಲಿ ಎಪ್ಪತ್ತು ಪ್ರಬೇಧಗಳಿದ್ದು, ಈ ಪೈಕಿ ವರ್ಜಿನಿಯಾ ಟೊಬ್ಯಾಕೋ ಎಂಬ ತಳಿ ಅತ್ಯಂತ ಅಪಾಯಕಾರಿಯಾಗಿದೆ. ಒಂದೆಡೆ ತಂಬಾಕು ಬೆಳೆ ತಾನು ಬೆಳೆದ ಪ್ರದೇಶದ ಫಲವತ್ತತೆಯನ್ನೇ ನಾಶಪಡಿಸಿ ಆ ಪ್ರದೇಶವನ್ನ ಮರಳುಗಾಡನ್ನಾಗಿಸುತ್ತದೆ. ಮತ್ತೊಂದೆಡೆ ಒಂದು ಕೆಜಿ ತಂಬಾಕು ಎಲೆ ಸಂಸ್ಕರಿಸಲು 5-8 ಕೆಜಿ ಉರುವಲು ಸೌದೆ ಬೇಕಾಗುತ್ತದೆ. ಒಟ್ಟಾರೆ ವಾಣಿಜ್ಯ ಬೆಳೆ ಎಂದೇ ಪರಿಗಣಿಸಲ್ಪಡುವ ತಂಬಾಕು ತನ್ನ ಈ ಗುಣ-ಲಕ್ಷಣಗಳಿಂದ ಪರಿಸರದ ಶತ್ರು ಎನಿಸಿದೆ ಎಂದರು.

ಕರ್ನಾಟಕದಲ್ಲೇ ತಂಬಾಕು ಸೇವನೆ ಅತೀ ಹೆಚ್ಚು..!

ಭಾರತದಲ್ಲಿ 27.4 ಕೋಟಿ ಜನರು ತಂಬಾಕನ್ನ ವಿವಿಧ ರೂಪದಲ್ಲಿ ಸೇವಿಸುತ್ತಿದ್ದಾರೆ. ತಂಬಾಕು ಸೇವನೆಯಿಂದ ಪ್ರತಿದಿನ 2700 ಮಂದಿ ಸಾವನ್ನಪ್ಪುತ್ತಿದ್ದಾರೆ. ದುರಂತ ಎಂದರೆ ಇಡೀ ರಾಷ್ಟ್ರದಲ್ಲೇ ಅತೀ ಹೆಚ್ಚು ತಂಬಾಕು ಸೇವಿಸುವ ರಾಜ್ಯ ಕರ್ನಾಟಕವಾಗಿದೆ. ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ತಂಬಾಕಿನಿಂದ ಉಂಟಾಗುವ ವಿವಿಧ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿ ವರ್ಷ 35,000 ಮಂದಿ ಕ್ಯಾನ್ಸರ್​ಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಒಂದು ತಂಬಾಕು ಎಲೆಯಲ್ಲಿ ನಾಲ್ಕು ಸಾವಿರ ರಾಸಾಯನಿಕಗಳಿರುತ್ತವೆ. ಅದರಲ್ಲಿ ನಾಲ್ಕು ನೂರು ಕಾಸ್ಮೋಜೆನಿಕ್ ರಾಸಾಯಕನಿಕಗಳು ಎಂಬ ಆತಂಕಕಾರಿ ಅಂಕಿಅಂಶಗಳನ್ನು ಡಾ. ಚಂದ್ರಕಿರಣ್ ತಮ್ಮ ಉಪನ್ಯಾಸದಲ್ಲಿ ಹೊರಹಾಕಿದರು.

ಜೀವಿತಾವಧಿಯ 11 ನಿಮಿಷ ಕಡಿತಗೊಳಿಸುವ ಒಂದು ಸಿಗರೇಟ್
ಮಾನವನ ಏಕಾಗ್ರತೆಯನ್ನೂ ಕೊಲ್ಲುವ ತಂಬಾಕು ದಿನಕಳೆದಂತೆ ಮಾನವನನ್ನೇ ಬಲಿತೆಗೆದುಕೊಳ್ಳುತ್ತಿದೆ. ಕೇವಲ ಒಂದು ಸಿಗರೇಟ್ ಸೇವನೆಯಿಂದ ನಾವು ನಮ್ಮ ಜೀವಿತಾವಧಿಯ ಹನ್ನೊಂದು ನಿಮಿಷಗಳನ್ನು ಕಡಿತಗೊಳಿಸಿಕೊಳ್ಳುತ್ತಿದ್ದೇವೆ. ಮಾದಕ ವಸ್ತು ಎನಿಸಿರುವ ಕೊಕೇನ್ ಸೇವನೆ 14 ಸೆಕೆಂಡುಗಳಲ್ಲಿ ಮಾನವನ ಮೆದುಳು ಪ್ರವೇಶಿಸಿದರೆ, ನಿಕೋಟಿನ್ ಅಂಶ ಒಳಗೊಂಡ ಬೀಡಿ ಮತ್ತು ಸಿಗರೇಟ್ ಸೇವಿಸುವ, ಹೊಗೆಸೊಪ್ಪು ಮತ್ತು ನಶ್ಯೆ ಬಳಸುವ ವ್ಯಕ್ತಿಯ ಮೆದುಳನ್ನು ಕೇವಲ ಏಳು ಸೆಕೆಂಡ್‍ಗಳಲ್ಲೇ ಪ್ರವೇಶಿಸುತ್ತದೆ ಎಂಬ ಅಂಶವನ್ನು ಬಹಿರಂಗಪಡಿಸಿದರು.

ಯಾರಿಗೆ ಹೆಚ್ಚು ಅಪಾಯಕಾರಿ?
ಧೂಮಪಾನ ಮಾಡುವವರು ತಮ್ಮ ಶ್ವಾಸಕೋಶದಲ್ಲಿ ಹೊಗೆಯನ್ನು ಎರಡೂವರೆ ನಿಮಿಷ ಇಟ್ಟುಕೊಂಡರೆ, ಅವರ ಸುತ್ತ-ಮುತ್ತ ಸುಳಿಯುವ ನಿಸ್ಕ್ರಿಯ ಧೂಮಪಾನಿಗಳು (ಪ್ಯಾಸಿವ್ ಸ್ಮೋಕರ್ಸ್) ಮೂರೂವರೆಯಿಂದ 4 ನಿಮಿಷಗಳ ಕಾಲ ಇಟ್ಟುಕೊಳ್ಳುತ್ತಾರೆ. ತಾವು ಮಾಡದ ತಪ್ಪಿಗೆ ನಿಸ್ಕ್ರಿಯ ಧೂಮಪಾನಿಗಳು ಕ್ಯಾನ್ಸರ್​ನಂತಹ ಮಾರಣಾಂತಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಂಬಾಕಿನ ಮೂಲೋತ್ಪಾಟನೆಯಾಗಬೇಕಿದೆ. ಅದಕ್ಕಾಗಿ ತಂಬಾಕು ಬೆಳೆಯುವ ಪ್ರದೇಶದಲ್ಲಿ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು ಎಂಬುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದರಿಂದ ರೈತರ ಹಿತದ ಜೊತೆಗೆ ಜನಸಾಮಾನ್ಯರ ಆರೋಗ್ಯ ರಕ್ಷಣೆಯೂ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ ನಿಜಾಮುದ್ದೀನ್ ಮದಿನಿ, ಕುಟುಂಬ ಕಲ್ಯಾಣಾಧಿಕಾರಿ ಡಾ ಮಮತಾ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ ನದೀಮ್ ಅಹಮದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ಶಾಖೆಯ ಉಪ ನಿರ್ದೇಶಕ ಡಿಪಿ ಮುರಳೀಧರ್ ಹಾಗೂ ಇನ್ನಿತರ ಗಣ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.