ನೆನಪಿನ ಶಕ್ತಿ ಹೆಚ್ಚಾಗಬೇಕಾ? ಹಾಗಿದ್ರೆ ಸರಿಯಾಗಿ ನಿದ್ರೆ ಮಾಡಿ

ಮೆಮೊರಿ.. ಬದುಕಿನಲ್ಲಿ ನೆನಪುಗಳು ಬಹಳ ಮುಖ್ಯ. ಕೆಲವೊಮ್ಮೆ ನೆನಪಿನ ಶಕ್ತಿ ಕುಂಠಿತಗೊಂಡು ಅಗತ್ಯ ಟೈಮ್​​ಗೆ ನೆನಪು ಆಗೋದೇ ಇಲ್ಲ. ಏನೋ ಒಂದು ನೆನಪು ಮಾಡ್ಕೊಂಡಿದ್ದೆ. ಹೇಳಲೇ ಬೇಕಿತ್ತಲ್ವಾ.. ಇಂಪಾರ್ಟೆಂಟ್​ ಕೆಲ್ಸ ಬೇರೆ ಆಗಿತ್ತು. ಈಗೇನು ಮಾಡೋದು ಅಂತಾ ಆಗಾಗ ತಲೆ ಕೆಡಿಸಿಕೊಳ್ತೇವೆ. ಎಷ್ಟೇ ಮಾಡಿದ್ರೂ ನೆನಪಿಗೆ ಬರೋದೇ ಇಲ್ಲ. ಇದ್ಕೆಲ್ಲಾ ಕಾರಣ ನಿದ್ರೆ ಕೂಡ ಹೌದು ಅಂದ್ರೆ ನಂಬಲೇಬೇಕು. ಕೆಲವೊಮ್ಮೆ ನಿದ್ರೆ ಕಮ್ಮಿ ಆದಾಗಲೂ ಇಂತಹ ಸಮಸ್ಯೆ ಎದುರಾಗುತ್ತೆ ಅಂತಿದೆ ವರದಿ.

ನೆನಪಿನ ಶಕ್ತಿಗೆ ಬೇಕು ನಿದ್ರೆ

ನಮ್ಮ ನೆನಪಿನ ಶಕ್ತಿ ಹೆಚ್ಚಳಕ್ಕೆ ನಿದ್ದೆ ಮುಖ್ಯ. ಸರಿಯಾಗಿ ನಿದ್ರೆ ಮಾಡೋದ್ರಿಂದ ಹಳೇ ನೆನಪು ಮತ್ತು ಹೊಸ ಅರಿವು ಎರಡೂ ಸಮತೋಲಿತವಾಗಿ ಮಿಶ್ರಣವಾಗುತ್ತದೆಯಂತೆ. ಇದ್ರಿಂದ ನಮ್ಮ ಮೆಮೊರಿ ಪವರ್ ಕೂಡ ಹೆಚ್ಚಾಗುತ್ತದೆ ಎಂದು ಹೇಳಿದೆ ರಾಷ್ಟ್ರೀಯ ಆರೋಗ್ಯ ಸಂಸ್ಥೆ. ಹೌದು, ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಇತ್ತೀಚೆಗೆ ನೆನಪಿನ ಶಕ್ತಿ ಸಂಬಂಧ ಸಂಶೋಧನೆ ನಡೆಸಿದ್ದರು. ಮೆದುಳಿನಲ್ಲಿ ಎಷ್ಟು ನೆನಪಿನ ಸಂಗ್ರಹವಿರುತ್ತದೆ. ಹಾಗೂ ಕಡಿಮೆ ನಿದ್ರೆಯಿಂದ ಅದರಲ್ಲಿ ಎಷ್ಟನ್ನು ನಾವು ನೆನಪು ಮಾಡಿಕೊಳ್ಳಲು ಸಾಧ್ಯ ಅನ್ನೋದ್ರ ಬಗ್ಗೆ ಅಧ್ಯಯನ ನಡೆಸಿದ್ದರು. ಅದರಲ್ಲಿ ನೆನನಪಿನ ಶಕ್ತಿ ಹೆಚ್ಚಳಕ್ಕೆ ಸರಿಯಾದ ನಿದ್ರೆ ಕೂಡ ಅಗತ್ಯ ಅನ್ನೋದು ದೃಢಪಟ್ಟಿದೆ.

ರ್‍ಯಾಪಿಡ್ ಐ ಮೂವ್‌ಮೆಂಟ್ ನಿದ್ರೆ ಇಂಪಾರ್ಟೆಂಟ್..!

ವಯಸ್ಸಾದ ಮೇಲೆ ಕ್ರಮೇಣ ನೆನಪಿನ ಶಕ್ತಿ ಕಮ್ಮಿ ಆಗಿ ಬಿಡುತ್ತದೆ. ನಿದ್ರೆ ಮಾಡುವ ಮೂಲಕ ವಯಸ್ಸಾದವರೂ ಕೂಡ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಂತೆ. ಇನ್ನು ನಿದ್ರೆಯಲ್ಲಿ ಹಲವು ಹಂತಗಳಿವೆ. ಅದ್ರಲ್ಲಿ ಆರ್‌ಇಎಂ (ರ್‍ಯಾಪಿಡ್ ಐ ಮೂವ್‌ಮೆಂಟ್) ಕೂಡ ಒಂದು. ಸಾಮಾನ್ಯವಾಗಿ ಆರ್‌ಇಎಂ ಹಂತದಲ್ಲಿ ಹೆಚ್ಚು ಕನಸುಗಳು ಬೀಳುತ್ತವೆಯಂತೆ. ಅರಿವಿನ ವಿಚಾರದಲ್ಲಿ ಆರ್‌ಇಎಂ ಮಹತ್ವದ ಪಾತ್ರ  ವಹಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಒಂದು ವೇಳೆ ಸರಿಯಾಗಿ ನಿದ್ರೆ ಮಾಡದಿದ್ರೆ ಕಲಿಕೆಯ ಸಾಮರ್ಥ್ಯ ಶೇ. 40ರಷ್ಟು ಕಮ್ಮಿ ಆಗುತ್ತದೆ. ಅಲ್ಲದೇ ಮೆದುಳಿನಲ್ಲಿರುವ ಹಿಪ್ಪೊಕ್ಯಾಂಪಸ್ ಸ್ಮರಣ ಶಕ್ತಿ ಕೂಡ ಕಮ್ಮಿ ಆಗುತ್ತದೆ.

ನೆನಪು ಗಟ್ಟಿಯಾಗಲು ಡೀಪ್ ನಿದ್ರೆ ಅಗತ್ಯ

ರಾತ್ರಿ ಮಲಗಿದ್ದ ವೇಳೆ ಎಚ್ಚರವಾದಾಗ ಘಟಿಸಿದ ಎಲ್ಲಾ ಘಟನೆಗಳನ್ನು ನೆನಪು ಮಾಡಿಕೊಳ್ತೇವೆ. ಅವುಗಳಲ್ಲಿ ಸಾಕಷ್ಟನ್ನು ಮರೆತು ಬಿಡುತ್ತೇವೆ. ನೆನಪುಗಳು ಮೊದಲಿಗೆ ತೀರಾ ಆಳವಾಗಿ ಬೇರು ಬಿಡಲ್ಲ. ತುಂಬಾ ಸೂಕ್ಷ್ಮವಾಗಿದ್ದು, ನಾವು ಗಾಢ ನಿದ್ರೆಗೆ ಜಾರಿದಾಗ ಅವುಗಳು ಮೆದುಳಿನ ಆಳದಲ್ಲಿ ಜಾಗ ಪಡೆಯಲು ಯಶಸ್ವಿಯಾಗುತ್ತದೆ. ಹೀಗಾಗಿ ರಾತ್ರಿ ನಿದ್ರೆ ಮಾಡಿದಾಗ ನೆನಪುಗಳು ಇನ್ನಷ್ಟು ಗಟ್ಟಿಯಾಗುತ್ತವೆ ಎನ್ನುತ್ತಾರೆ ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಡಾ.ರಾಬರ್ಟ್ ಸ್ಟಿಕ್‌ಗೋಲ್ಡ್.

ಆಳವಾದ ನಿದ್ರೆಯಲ್ಲಿ ನೆನಪುಗಳು ಬಂದಾಗ ಅದು ಇನ್ನಷ್ಟು ಗಟ್ಟಿಯಾಗಲಿದ್ಯಂತೆ. ಆರ್‌ಇಎಂ ಹಂತದಲ್ಲಿ ಇದು ಹಲವು ನೆನಪುಗಳ ಜೊತೆ ಹೊಂದಾಣಿಕೆ ಕೂಡ ಮಾಡುತ್ತದೆ. ಆರ್‌ಇಎಂ ಹಂತವು ಭಾವನೆಗಳ ನೆನಪುಗಳನ್ನು ವಿಶ್ಲೇಷಣೆ ಕೂಡ ಮಾಡುತ್ತದೆ. ಇದರಿಂದ ಕೆಲವೊಂದು ಗಂಭೀರ ಭಾವನಾತ್ಮಕ ವಿಷಯಗಳಿಂದ ಹೊರಬಂದು ಮನಸ್ಸು ಶಾಂತವಾಗಲು ನೆರವಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv