ಹರಪ್ಪ ಕಾಲದ ಸ್ಮಶಾನದಲ್ಲಿ ಪುರಾತನ ಜೋಡಿಯ ಅಸ್ಥಿಪಂಜರ ಪತ್ತೆ..!

ಪುಣೆ: ಸಿಂಧು ಕಣಿವೆ ನಾಗರಿಕತೆಯ ಪ್ರಮುಖ ನಗರಗಳಲ್ಲಿ ಒಂದಾದ ಹರಪ್ಪದಲ್ಲಿ ಓರ್ವ ಮಹಿಳೆ ಹಾಗೂ ಪುರುಷನನ್ನು ಒಂದೇ ಸಮಾಧಿಯಲ್ಲಿ ಹೂಳಲಾಗಿದ್ದು, ಅವರ ಅಸ್ಥಿಪಂಜರಗಳು ಪತ್ತೆಯಾಗಿವೆ. 2015ರಲ್ಲಿ ಭಾರತ ಹಾಗೂ ದಕ್ಷಿಣ ಕೊರಿಯಾದ ವಿಜ್ಞಾನಿಗಳು ಹರಪ್ಪ ನಗರದಲ್ಲಿ ಈ ಸ್ಕೆಲಿಟನ್​ಗಳನ್ನ ಪತ್ತೆ ಹಚ್ಚಿದ್ದಾರೆ. ಈ ಜೋಡಿ ಬದುಕಿದ್ದ ಕಾಲ ಹಾಗೂ ಅವರ ಸಾವಿಗೆ ಕಾರಣವೇನು ಎಂಬ ಬಗ್ಗೆ ಮೂರು ವರ್ಷಗಳ ಕಾಲ ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಈಗ ಇವರ ಪತ್ತೆಹಚ್ಚುವಿಕೆ ಬಗ್ಗೆ ಎಸಿಬಿ ಜರ್ನಲ್​ ಆಫ್​​ ಅನಾಟಮಿ ಅಂಡ್​ ಸೆಲ್​​ ಬಯಾಲಜಿ ಎಂಬ ಅಂತರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪುಣೆಯ ಡೆಕ್ಕನ್​ ಕಾಲೇಜ್​ ಡೀಮ್ಡ್​​ ಯೂನಿವರ್ಸಿಟಿಯ ಪ್ರಾಚ್ಯಶಾಸ್ತ್ರಜ್ಞರು ಈ ಸ್ಕೆಲಿಟನ್​ಗಳನ್ನ ಅನ್ವೇಷಿಸಿದ್ದಾರೆ. ಹರಿಯಾಣದ ರಾಖಿಘಡಿಯಲ್ಲಿ ಉತ್ಖನನ ಮಾಡಲಾಗಿರೋ ಹರಪ್ಪಾ ತಾಣದಲ್ಲಿ ಈ ಜೋಡಿಯ ಸಮಾಧಿ ಇದೆ. ಸಮಾಧಿಯಲ್ಲಿ ಹೂಳಲಾದ ಸ್ಕೆಲಿಟನ್​​ಗಳನ್ನ ನೋಡಿದರೆ ಮಹಿಳೆಯನ್ನು, ಪುರುಷ ನೋಡುತ್ತಿರುವ ರೀತಿಯಲ್ಲಿದೆ. ಇವರು ದಂಪತಿ ಇರಬಹುದು ಎಂದು ನಾವು ಊಹಿಸಿದ್ದೇವೆ. ಇಬ್ಬರೂ ಒಂದೇ ಸಮಯದಲ್ಲಿ ಸಾವನ್ನಪ್ಪಿರಬಹುದು. ಇವರು ಹೇಗೆ ಮೃತಪಟ್ಟರು ಅನ್ನೋದು ಇನ್ನೂ ರಹಸ್ಯವಾಗೇ ಉಳಿದಿದೆ ಎಂದು ಸಂಶೋಧಕರ ತಂಡದ ನೇತೃತ್ವ ವಹಿಸಿದ್ದ ವಸಂತ್​​ ಶಿಂಧೆ ಹೇಳಿದ್ದಾರೆ.

ಸುಮಾರು ಅರ್ಧ ಮೀಟರ್​ ಆಳದ ಮರಳಿನ ಗುಂಡಿಯಲ್ಲಿ ಇಬ್ಬರನ್ನೂ ಹೂಳಲಾಗಿದೆ. ಸಾವನ್ನಪ್ಪಿದ ಸಂದರ್ಭದಲ್ಲಿ ಮಹಿಳೆಗೆ 35 ವರ್ಷ ಹಾಗೂ ಪುರುಷ 38 ವರ್ಷ ವಯಸ್ಸಿನವರಾಗಿದ್ದರು. ಮಹಿಳೆ 5.6 ಅಡಿ ಎತ್ತರವಿದ್ರೆ, ಪುರುಷ 5.8 ಅಡಿ ಎತ್ತರವಿದ್ದಾರೆ. ಅವರು ಸತ್ತಾಗ ಆರೋಗ್ಯವಾಗಿಯೇ ಇದ್ದರು ಅಂತ ತಿಳಿದುಬಂದಿದೆ. ನಮ್ಮ ಪರೀಕ್ಷೆಗಳಲ್ಲಿ ಇವರ ಮೂಳೆಗಳ ಮೇಲೆ ಯಾವುದೇ ಗೆರೆಗಳು ಇರುವುದಾಗಲಿ ಅಥವಾ ತಲೆಬುರುಡೆ ಅಸಹಜವಾಗಿ ದಪ್ಪವಾಗಿರುವುದು ಪತ್ತೆಯಾಗಿಲ್ಲ. ಈ ರೀತಿಯ ಲಕ್ಷಣಗಳಿದ್ದರೆ ಗಾಯ, ಕಾಯಿಲೆ ಅಥವಾ ಬ್ರೇನ್​​ ಫೀವರ್​ ಇತ್ತು ಎಂದು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಡೆಕ್ಕನ್​ ಕಾಲೇಜ್​ ಡೀಮ್ಡ್​​ ಯೂನಿವರ್ಸಿಟಿಯ ಡಿಪಾರ್ಟ್​​ಮೆಂಟ್​ ಆಫ್​ ಆರ್ಕಿಯಾಲಜಿ, ಸಿಯೋಲ್​​ನ ಇನ್ಸ್​​​ಟಿಟ್ಯೂಟ್​ ಆಫ್ ಫೋರೆನ್ಸಿಕ್​ ಸೈನ್ಸ್​​​​ ಹಾಗೂ ಸಿಯೋಲ್​​ ನ್ಯಾಷನಲ್​ ಯೂನಿವರ್ಸಿಟಿ ​ ಕಾಲೇಜ್ ಆಫ್ ಮೆಡಿಸಿನ್​​​​​​ ಈ ಉತ್ಖನನ ಹಾಗೂ ವಿಶ್ಲೇಷಣೆಯನ್ನು ಮಾಡಿವೆ.

ಭಾರತ ಹಾಗೂ ಪಾಕಿಸ್ತಾನದಲ್ಲಿ ಈವರೆಗೆ ಪತ್ತೆಯಾಗಿರುವ 2 ಸಾವಿರಕ್ಕೂ ಹೆಚ್ಚು ಹರಪ್ಪ ತಾಣಗಳಲ್ಲಿ ರಾಖಿಘಡಿ ಅತ್ಯಂತ ದೊಡ್ಡ ತಾಣ. 1950ರಲ್ಲಿ ಮಹಿಳೆ ಹಾಗೂ ಪುರಷನ ಅಸ್ಥಿಪಂಜರಗಳು ಒಂದರ ಮೇಲೊಂದು ಮಲಗಿಸಿದ್ದ ರೀತಿಯಲ್ಲಿ ಪತ್ತೆಯಾಗಿತ್ತು. ಮಹಿಳೆಯ ತಲೆಬುರುಡೆಯಲ್ಲಿ ಗಾಯದ ಗುರುತು ಇತ್ತು. ಮಹಿಳೆಯನ್ನ ಕೊಲೆ ಮಾಡಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದರು. ಆದ್ರೆ ಇದನ್ನ ಸಾಬೀತುಪಡಿಸಲು ಆಗಿಲ್ಲ.

ಇನ್ನು ಈ ತಾಣದಲ್ಲಿ ಸಿಕ್ಕಿರುವ ಕೆಲವು ವಸ್ತುಗಳು ಆ ಕಾಲದ ಶಾಸ್ತ್ರ ಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲಿವೆ. ಹರಪ್ಪ ನಗರದಲ್ಲಿ ಪತ್ತೆಯಾಗಿರುವ ಸಮಾಧಿಗಳಲ್ಲಿ ಸಾಮಾನ್ಯವಾಗಿ ಊಟದ ಮಡಿಕೆಗಳು ಹಾಗೂ ಆಭರಣಗಳು ಸಿಕ್ಕಿವೆ. ಬಹುಶಃ ಆಗಿನ ಕಾಲದ ಜನ ಸತ್ತ ನಂತರವೂ ಜೀವನ ಇರುತ್ತದೆ ಎಂದು ನಂಬಿಕೆ ಹೊಂದಿದ್ದರು ಎನ್ನಿಸುತ್ತದೆ. ಹೀಗಾಗಿ ಈ ವಸ್ತುಗಳನ್ನ ಸಮಾಧಿಯಲ್ಲಿ ಇಟ್ಟಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.