ಛೇ ಇದೆಂಥ ಕ್ರೌರ್ಯ, ಸೌದಿಅರೇಬಿಯಾದಲ್ಲಿ ತಾಯಿ ಮುಂದೆಯೇ ಪುಟ್ಟ ಕಂದನ ಶಿರಚ್ಛೇದ..!

ಸೌದಿ ಅರೇಬಿಯಾ: ತಾಯಿಯ ಕಣ್ಣೆದುರೇ 6 ವರ್ಷದ ಬಾಲಕನನ್ನು ಎಳೆದೊಯ್ದು ಶಿರಚ್ಛೇದ ಮಾಡಿರುವ ಭೀಕರ ಘಟನೆ ಕಳೆದ ಗುರುವಾರ ಸೌದಿ ಅರೇಬಿಯಾದಲ್ಲಿ ನಡೆದಿದೆ. ಝಕಾರಿಯಾ ಅಲ್​​​ ಜಬೇರ್​ ಹತ್ಯೆಗೀಡಾದ ಬಾಲಕ. ಝಕಾರಿಯಾ ತನ್ನ ತಾಯಿಯ ಜೊತೆ ಟ್ಯಾಕ್ಸಿಯಲ್ಲಿ ಮದೀನಾಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಟ್ಯಾಕ್ಸಿ ಡ್ರೈವರ್ ಬಾಲಕನನ್ನು ಕಾರಿನಿಂದ ಇಳಿಸಿ​​ ಅಲ್​-ತಿಲಾಲ್​ ಏರಿಯಾದ ಕಾಫಿ ಶಾಪ್​ವೊಂದರ ಬಳಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕನಿಗೆ ಹಲವು ಬಾರಿ ಇರಿದಿದ್ದಾನೆ. ಬಳಿಕ ಗಾಜಿನ ಬಾಟಲಿಯನ್ನ ಒಡೆದು ಬಾಲಕನ ಕತ್ತು ಸೀಳಿದ್ದಾನೆ. ಆ ಬಾಲಕ ಶಿಯಾ ಪಂಗಡದವನಾಗಿದ್ದರಿಂದ ಈ ರೀತಿ ಶಿರಚ್ಛೇದವನ್ನು ಆ ಟ್ಯಾಕ್ಸಿ ಚಾಲಕ ಮಾಡಿದ್ದಾನೆ ಎಂದು ವರದಿಯಾಗಿದೆ.

ಕೊಲೆಯಾದ ಮುದ್ದು ಕಂದಮ್ಮ

ಮಗನನ್ನು ಕಣ್ಣೆದುರೇ ಕತ್ತು ಸೀಳಿದ ದೃಶ್ಯ ಕಂಡು ತಾಯಿ ಚೀರಾಡಿದ್ದಾರೆ. ಆಕೆ ಹಾಗೂ ಸ್ಥಳೀಯ ಪೊಲೀಸರು ಡ್ರೈವರ್​​ನನ್ನು ತಡೆಯಲು ಯತ್ನಿಸಿದರಾದ್ರೂ ಯಾವುದೇ ಪ್ರಯೋಜನವಾಗಿಲ್ಲ. ಸಾಜಿದ್​ ಹುಸೇನ್​​ ಎಂಬವರು ಬಾಲಕನ ಫೋಟೋಗಳನ್ನ ಟ್ವಿಟರ್​​ನಲ್ಲಿ ಹಂಚಿಕೊಂಡು, ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. “ಅತ್ಯಂತ ಚಿಕ್ಕ ಶವಪೆಟ್ಟಿಗೆಗಳು ತುಂಬಾ ಭಾರವಾಗಿರುತ್ತವೆ” ಎಂದು ಬರೆದು ಅವರು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.

 

6 ವರ್ಷದ ಝಕಾರಿಯಾನನ್ನು ಸೌದಿ ಚಾಲಕ ಶಿರಚ್ಛೇದ ಮಾಡಿದ್ದು ಅತ್ಯಂತ ಬರ್ಬರವಾದ ಘಟನೆ. ನೀವು ಶಿಯಾ ಅಥವಾ ಸುನ್ನಿಯಾಗಿರಬೇಕಿಲ್ಲ. ಮೊದಲು ಮಾನವರಾಗಲು ಪ್ರಯತ್ನಿಸಿ. ನ್ಯಾಯ ಸಿಗೋದು ವಿಳಂಬವಾದ್ರೆ ನ್ಯಾಯ ಸಿಗಲಿಲ್ಲವೆಂದೇ ಅರ್ಥ ಎಂದು ಅವರು ಹೇಳಿದ್ದಾರೆ.

ಕೊಲೆಗೆ ಕಾರಣವೇನು?
ಟ್ಯಾಕ್ಸಿ ಚಾಲಕ ಬಾಲಕನನ್ನು ಕೊಲೆ ಮಾಡುವ ಮುನ್ನ ಆಕೆಯ ತಾಯಿಗೆ ನೀವು ಶಿಯಾನಾ? ಎಂದು ಕೇಳಿದ್ದಾನೆ. (ಶಿಯಾ ಹಾಗೂ ಸುನ್ನಿ ಮುಸ್ಲಿಮ್​ ಧರ್ಮದ ಎರಡು ವಿಭಾಗಗಳು). ಇದಕ್ಕೆ ಅವರು ಹೌದು ಎಂದು ಉತ್ತರಿಸಿದ್ದರು ಎಂದು ವರದಿಯಾಗಿದೆ. ಇನ್ನು ಸೌದಿ ಶಿಯಾ ಸಮುದಾಯ ಬಾಲಕನ ಹತ್ಯೆಯನ್ನು ಜನಾಂಗೀಯ ಹಿಂಸೆ ಎಂದು ಕರೆದಿದೆ. ಈ ಬಗ್ಗೆ ಕೂಡಲೇ ತನಿಖೆಯಾಗಬೇಕು ಎಂದು ಆಗ್ರಹಿಸಿದೆ. ಒಟ್ಟಿನಲ್ಲಿ ಬಾಲಕನ ಶಿರಚ್ಛೇದದೊಂದಿಗೆ ಮಾನವೀಯತೆಯ ಕೊಲೆಯಂತೂ ನಡೆದು ಹೋಗಿದೆ ಎಂದು ವಿಶ್ವಮಟ್ಟದಲ್ಲಿ ಈ ಘಟನೆಗೆ ಖಂಡನೆ ವ್ಯಕ್ತವಾಗಿದೆ.