ಈಗ ಪುರುಷ ಸಿಂಗಲ್ ಪೇರೆಂಟ್​​ಗೂ ಸಿಗಲಿದೆ ಶಿಶು ಆರೈಕೆ ರಜೆ!

ನವದೆಹಲಿ: ಕೇಂದ್ರ ಸರ್ಕಾರದ ನೌಕರರಾಗಿ ಸೇವೆ ಸಲ್ಲಿಸುವ ಸಿಂಗಲ್​​ ಪೇರೆಂಟ್​​ ಪುರುಷರಿಗೆ ಹೊಸ ವರ್ಷಕ್ಕೊ ಮುನ್ನ ಸಿಹಿ ಸುದ್ದಿ ಸಿಕ್ಕಿದೆ. ಇನ್ಮುಂದೆ, ಪುರುಷ ಸಿಂಗಲ್​ ಪೇರೆಂಟ್​​ಗಳು, ಮಹಿಳಾ ಸಿಬ್ಬಂದಿಗಳಂತೆಯೇ ಶಿಶು ಆರೈಕೆ ರಜೆ (ಚೈಲ್ಡ್​​ ಕೇರ್​ ಲೀವ್​​- ಸಿಸಿಎಲ್) ತೆಗೆದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಏಕಪಾಲಕ ಪುರುಷರು ತಮ್ಮ ಸೇವಾವಧಿಯಲ್ಲಿ ಒಟ್ಟು 730 ದಿನ ಮಕ್ಕಳ ಆರೈಕೆ ರಜೆ (ಸಿಸಿಎಲ್) ತೆಗೆದುಕೊಳ್ಳಬಹುದಾಗಿದೆ. ಇದಕ್ಕಾಗಿ, ಕೇಂದ್ರ ಸರ್ಕಾರ ಅಧಿಸೂಚನೆಯೊಂದನ್ನ ಹೊರಡಿಸಿದೆ.

ಇಲ್ಲಿಯವರೆಗೆ, ಮಹಿಳಾ ಉದ್ಯೋಗಿಗಳಿಗೆ ಮಾತ್ರ 730 ದಿನಗಳ ಸಂಬಳಸಹಿತ ಶಿಶುಪಾಲನಾ ರಜೆಗೆ ಅನುಮತಿ ನೀಡಲಾಗಿತ್ತು. ಈಗ, ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸಿಗೆ ಅನುಗುಣವಾಗಿ ಸಿಂಗಲ್​​ ಪೇರೆಂಟ್​​ಗೆ ಈ ಸೌಲಭ್ಯ ವಿಸ್ತರಿಸಿದೆ. ಈಗ, 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ನೋಡಿಕೊಳ್ಳುವ ಏಕೈಕ ತಂದೆ, ಮಹಿಳಾ ಉದ್ಯೋಗಿಗಳ ಸಮಾನವಾಗಿ ಸಿಸಿಎಲ್​​​​ ಪ್ರಯೋಜನವನ್ನ ಪಡೆಯಬಹುದು.

7ನೇ ವೇತನ ಆಯೋಗ ಹೇಳಿದೇನು?
ಪುರುಷ ಉದ್ಯೋಗಿ ಏಕೈಕ ಪೋಷಕರಾಗಿದ್ದರೆ, ಮಕ್ಕಳನ್ನ ಬೆಳೆಸುವ ಜವಾಬ್ದಾರಿ ಆ ಪುರುಷನ ಹೆಗಲ ಮೇಲಿರುತ್ತದೆ. ಹೀಗಾಗಿ ಏಕೈಕ ಪುರುಷ ಪೋಷಕರಿಗೆ ಸಿಸಿಎಲ್ ಶಿಫಾರಸು ಮಾಡಲಾಗಿದೆ. ಇದಲ್ಲದೆ, ಏಕೈಕ ತಾಯಂದಿರಾಗಿರುವ ಉದ್ಯೋಗಿಗಳ ಹೆಗಲ ಮೇಲೆ ಹೆಚ್ಚುವರಿ ಜವಾಬ್ದಾರಿಯನ್ನ ಆಯೋಗವು ಗುರುತಿಸುತ್ತದೆ. ಸಿಸಿಎಲ್ ಹೊರತಾಗಿ ಮಹಿಳಾ ಸಿಬ್ಬಂದಿ 180 ದಿನಗಳು ಹೆರಿಗೆ ರಜೆ ಹಾಗೂ ಪುರುಷ ಸಿಬ್ಬಂದಿ 15 ದಿನ ಪಿತೃತ್ವ ರಜೆ ಪಡೆಯಬಹುದಾಗಿದೆ ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ. ಮೊದಲ 365 ದಿನಗಳ ಮಕ್ಕಳ ಆರೈಕೆ ರಜೆಯಲ್ಲಿ ಶೇ. 100 ರಷ್ಟು ವೇತನವನ್ನು ನೀಡಬೇಕು, ಆದರೆ ಮುಂದಿನ 365 ದಿನಗಳಲ್ಲಿ ಶೇ .80 ರಷ್ಟು ವೇತನ ನೀಡಬೇಕು ಎಂದು ಶಿಫಾರಸು ತಿಳಿಸಿದೆ.