ಸರಳ, ಸಜ್ಜನಿಕೆಯ ಸುಧಾ ಮೂರ್ತಿ..!

ಸುಧಾಮೂರ್ತಿ.. ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಇನ್ಫೋಸಿಸ್​ ಎಂಬ ದೈತ್ಯ ಐಟಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಎನ್​.ಆರ್​. ನಾರಾಯಣ ಮೂರ್ತಿಯವರ ಧರ್ಮಪತ್ನಿ. ಇವತ್ತು ಲಕ್ಷಾಂತರ ಮಂದಿ ಇನ್ಫೋಸಿಸ್ ಆಶ್ರಯದಲ್ಲಿ ಬೆಚ್ಚನೆಯ ನೆಲೆ ಕಂಡುಕೊಂಡಿದ್ದಾರೆ. ಐಟಿ ಉದ್ಯಮದಲ್ಲಿ ವಿದೇಶಿ ದಿಗ್ಗಜ ಸಂಸ್ಥೆಗಳು ಬೆಕ್ಕಸ ಬೆರಗಾಗುವಂತೆ ಮಾಡಿದೆ ಇನ್ಫೋಸಿಸ್​.. ನಮ್ಮ ದೇಶ, ರಾಜ್ಯ, ಊರಿನ ಕೀರ್ತಿ ಪತಾಕೆಯನ್ನು ದೇಶ ವಿದೇಶಗಳಿಗೂ ಪಸರಿಸಿದ್ದು ಇನ್ಫೋಸಿಸ್​ ಹೆಮ್ಮೆ. ಅಂತಹ ಇನ್ಫೋಸಿಸ್​ ಕಟ್ಟಲು ಅಂದು ಎನ್​.ಆರ್​.ನಾರಾಯಣಮೂರ್ತಿಯವರ ಬೆನ್ನೆಲುಬಾಗಿ ನಿಂತಿದ್ದು.. ಇದೇ ಸುಧಾಮೂರ್ತಿ.. ಸರಳ, ಸಜ್ಜನಿಕೆಯ ಸಾಕಾರ ಮೂರ್ತಿ..

ಸುಧಾಮೂರ್ತಿಯವರ ಸರಳತೆಯ ಬಗ್ಗೆ ನಿಮಗೆಷ್ಟು ಗೊತ್ತು..?
ತಮ್ಮ ಬಳಿ ಸಾವಿರಾರು ಕೋಟಿ ಹಣವಿದ್ದರೂ ಸುಧಾಮೂರ್ತಿಯವರು ಇಂದಿಗೂ ತಮ್ಮ ತನವನ್ನ ಬಿಟ್ಟು ಕೊಟ್ಟಿಲ್ಲ.. ಅಹಂ ಅನ್ನೋ ಬೇರನ್ನ ತಮ್ಮಲ್ಲಿ ಚೂರೂ ಚಿಗುರೊಡೆಯೋದಕ್ಕೇ ಬಿಟ್ಟಿಲ್ಲ. ಬಹುಶಃ ನೀವು ಸುಧಾಮೂರ್ತಿಯವರನ್ನ ಎದುರಿನಿಂದ ನೋಡಿದ್ರೆ ಗೊತ್ತಾಗುತ್ತೆ.. ಯಾಕಂದ್ರೆ, ಸುಧಾಮೂರ್ತಿಯವರಿಗೆ ಚಿನ್ನಾಭರಣದ ಹಂಗಿಲ್ಲ.. ದುಬಾರಿ ಉಡುಗೆಗಳನ್ನು ತೊಡುವ ಶೋಕಿಯಂತೂ ಇಲ್ಲವೇ ಇಲ್ಲ.. ವ್ಯಕ್ತಿತ್ವವೇ ವಜ್ರವಾಗಿರುವಾಗಿರುವಾಗ ಇದೆಲ್ಲಾ ಯಾಕೆ ಬೇಕು ಅಲ್ವಾ..? ಸುಧಾಮೂರ್ತಿಯವರ ಈ ಸಾದಾ ಸೀದಾ ನಡೆ ಅವರು ಇಲ್ಲಿರುವಾಗ ಮಾತ್ರವಲ್ಲ.. ದೇಶ ವಿದೇಶಗಳಿಗೆ ಭೇಟಿ ಕೊಟ್ಟಾಗಲೂ ಸುಧಾಮೂರ್ತಿ ಒಬ್ಬ ಸಾಧಾರಣ ಮಹಿಳೆಯಾಗಿರ್ತಾರೆಯೇ ಹೊರತು.. ವಿಐಪಿಯಾಗಿ ಅಲ್ಲ.. ಅದಕ್ಕೆ ಇಂಟರೆಸ್ಟಿಂಗ್​ ಕಥೆಗಳನ್ನ ಹೇಳ್ತೀವಿ ಕೇಳಿ..

ಲಂಡನ್​ನ​ ಹೀಥ್ರೋ ಏರ್​​ಪೋರ್ಟ್​​ನಲ್ಲಿ ಏನಾಯ್ತು..?
ಇದು ದುಡ್ಡಿನ ಅಮಲನ್ನ ನೆತ್ತಿಗೇರಿಸಿಕೊಂಡಿದ್ದ ಮಹಿಳೆಯೊಬ್ಬಳು ಸುಧಾಮೂರ್ತಿಯವರಿಗೆ ಅವಮಾನ ಮಾಡಲು ಯತ್ನಿಸಿದ್ದ ಕ್ಷಣ.. ಒಂದು ದಿನ ಸುಧಾಮೂರ್ತಿಯವರು ಲಂಡನ್​ನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಸಲ್ವಾರ್​ ಕಮೀಜ್​ ಧರಿಸಿ ಬ್ಯುಸಿನೆಸ್ ಕ್ಲಾಸ್ ಕ್ಯೂನಲ್ಲಿ ನಿಂತಿದ್ದರು.. ಅದೇ ಕ್ಯೂನಲ್ಲಿ ಲಕ್ಸುರಿ ಉಡುಗೆ ತೊಟ್ಟು, ದುಬಾರಿ ಹೈ ಹೀಲ್ಸ್​ ಹಾಕಿ, ಕೈಯಲ್ಲಿ ಕಾಸ್ಟ್​​ಲೀ ಗುಚ್ಚಿ ಬ್ಯಾಗ್ (ಜಗತ್ತಿನ ಅತಿ ದುಬಾರಿ ಬ್ರಾಂಡ್​​​ಗಳಲ್ಲಿ ಮುಂಚೂಣಿಯಲ್ಲಿ ಇರುವಂಥದ್ದು)​ ಹಿಡಿದು ಸ್ಟೈಲ್​ ಆಗಿ ನಿಂತಿದ್ದ ಮಹಿಳೆಯೂ ಇದ್ದಳು.. ಸುಧಾಮೂರ್ತಿಯವರ ವಸ್ತ್ರ ಕಂಡು ಹೌಹಾರಿದ ಆಕೆ, ನೀನೇಕೆ ಈ ಕ್ಯೂನಲ್ಲಿದ್ದೀಯಾ..? ನಿಮ್ಮ ಕ್ಯೂ ಅಲ್ಲಿದೆ ಅಂತ ಎಕಾನಮಿ ಕ್ಲಾಸ್​ ಕ್ಯೂ ಕಡೆ ಕೈ ತೋರಿಸಿದ್ದಾಳೆ. ಮಾತಾಡ್ತಾ ಮಾತಾಡ್ತಾ ಕ್ಯಾಟಲ್​ ಕ್ಲಾಸ್​ ಪೀಪಲ್​(ಕೆಳ ವರ್ಗದ ಜನ) ಅಂತಾ ನಿಂದಿಸಿದ್ದಾಳೆ. ಮಹಿಳೆಯ ಮಾತು ಕೇಳಿ ಬೇಸರಗೊಂಡ ಸುಧಾಮೂರ್ತಿ ಆಕೆಗೆ ತಕ್ಕ ಉತ್ತರ ಕೊಡಲು ಮುಂದಾಗಿದ್ದಾರೆ. ಬಳಿಕ ಅಲ್ಲಿಂದ ತೆರಳಿದ್ದಾರೆ. ಆದ್ರೆ, ಸುಧಾಮೂರ್ತಿಯವರಿಗೆ ಅವಮಾನ ಮಾಡಲು ಯತ್ನಿಸಿದಾಕೆಗೆ ಇನ್ನಷ್ಟು ಬದುಕಿನ ಪಾಠ ಕಲಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಮಾರನೇ ದಿನ ತನ್ನ ದುಬಾರಿ ಧರಿಸು ಮನೆಯಲ್ಲಿ ಬಿಟ್ಟು ಸೀರೆಯುಟ್ಟು ಆ ಮಹಿಳೆ ಬಂದಿದ್ದ ಕಾರ್ಯಕ್ರಮಕ್ಕೆ ಸುಧಾಮೂರ್ತಿಯವರೇ ಮುಖ್ಯ ಅತಿಥಿಯಾಗಿ ಹೋಗಿದ್ದರು. ಸುಧಾಮೂರ್ತಿಯವರಿಗಿರುವ ಗೌರವ ಕಂಡು ಒಂದು ಕ್ಷಣ ಅದೇ ಮಹಿಳೆ ಪೆಚ್ಚಾಗಿ ಹೋಗಿದ್ದಳು.. ತಮಗಾದ ಈ ಅನುಭವವನ್ನ ಸುಧಾಮೂರ್ತಿಯವರು ತಮ್ಮ ‘ತ್ರೀ ಥೌಸಂಡ್​ ಸ್ಟಿಚಸ್​’ ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಕೊಡಗಿಗಾಗಿ ಮಿಡಿದಿತ್ತು ಅಮ್ಮನ ಹೃದಯ

ಅಷ್ಟೇ ಅಲ್ಲಾ, ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಭೀಕರ ಜಲಪ್ರಳಯ, ಭೂಕುಸಿತದ ಸಂದರ್ಭದಲ್ಲೂ ಅವರ ಹೃದಯ ಮಿಡಿದಿತ್ತು. ನೆರೆಯ ಸಂತ್ರಸ್ಥರ ಕಣ್ಣೀರೊರೆಸಲು ಸ್ವತಃ ತಾವೇ ಮುಂದು ನಿಂತಿದ್ದರು. ಮನೆ, ಮಠಗಳನ್ನ ಕಳೆದುಕೊಂಡು ಬೀದಿಗೆ ಬಂದವರ ಸಹಾಯಕ್ಕೆ ಮುಂದೆ ಬಂದು, ವಿಶೇಷ ಪ್ಯಾಕೆಟ್​ಗಳನ್ನ ನೀಡಿದ್ದರು. ಪ್ರತಿ ಪ್ಯಾಕೇಟ್​ನಲ್ಲೂ ಬಕೆಟ್, ಜಗ್, ಬ್ರಷ್, ಟೂತ್ ಪೇಸ್ಟ್, ಕೂಂಬ್, ಬ್ಲಾಕೆಂಟ್, ಬಿಸ್ಕೆಟ್ ಸೇರಿದಂತೆ ಒಟ್ಟು 42 ಐಟಮ್​ಗಳಿದ್ವು. ಇನ್ನೂ ವಿಶೇಷ ಅಂದ್ರೆ ಸ್ವತಃ ಅವರೇ ಪ್ರತಿ ಪ್ಯಾಕೇಟ್​ಗಳಿಗೂ ಎಲ್ಲಾ ವಸ್ತುಗಳನ್ನ ಮುತುವರ್ಜಿಯಿಂದ ತುಂಬಿ ಕಳುಹಿಸಿದ್ದು ಅವರ ಸರಳ, ಸಜ್ಜನಿಕೆಗೆ ಹಿಡಿದ ಮತ್ತೊಂದು ಕೈಗನ್ನಡಿ. ಜೊತೆಗೆ, ಇಂದು ದಸರಾ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕೊಡಗಿನ ಸಂತ್ರಸ್ತರಿಗೆ ಮನೆ ಕಟ್ಟಿ ಕೊಡಲು ₹25 ಕೋಟಿ ರೂಪಾಯಿ ನೀಡುವುದಾಗಿಯೂ ತಿಳಿಸಿದ್ರು.

ಪ್ರೆಸ್​ಕ್ಲಬ್​ನಲ್ಲೂ ಸರಳತೆಯ ದರ್ಶನ
ಇನ್ನು, ಸುಧಾಮೂರ್ತಿಯವರ ಸರಳತೆಗೆ ಹಿಡಿದ ಕೈಗನ್ನಡಿ ಎಂಬಂತೆ ಇತ್ತೀಚೆಗೆ ಪ್ರೆಸ್​ಕ್ಲಬ್​​ನಲ್ಲಿ ನಡೆದ ಒಂದು ಘಟನೆ ಸಾಕ್ಷಿಯಾಗಿತ್ತು. ಸುಧಾಮೂರ್ತಿಯವರ ಜೊತೆಗೆ ಮಾಧ್ಯಮ ಸಂವಾದ ಕಾರ್ಯಕ್ರಮವನ್ನು ಬೆಂಗಳೂರು ಪ್ರೆಸ್​ಕ್ಲಬ್​ ಏರ್ಪಡಿಸಿತ್ತು. ಕಾರ್ಯಕ್ರಮ ಮುಗಿದ ಬಳಿಕ ಛಾಯಾಗ್ರಾಹಕರೊಬ್ಬರು ಸುಧಾಮೂರ್ತಿಯವರಿಗೆ ತಮ್ಮ ಪುಸ್ತಕವನ್ನು ಉಡುಗೊರೆಯನ್ನಾಗಿ ನೀಡಿದ್ರು. ಪುಸ್ತಕವನ್ನು ನೋಡಿದ ಸುಧಾಮೂರ್ತಿ ಕೊಟ್ಟ ಪ್ರತಿಕ್ರಿಯೆ ಕಂಡು ಛಾಯಾಗ್ರಾಹಕ ಶಾಕ್​ ಆಗಿ ಹೋಗಿದ್ದರು. ನನಗೆ ಪುಸ್ತಕವನ್ನು ಫ್ರೀಯಾಗಿ ಕೊಡ್ತಿದ್ದೀರಾ ಅಂತಾ ಸುಧಾಮೂರ್ತಿ ಕೇಳಿದ್ರು. ಅದಕ್ಕೆ ಛಾಯಾಗ್ರಾಹಕರು ಹೌದು ಎಂದಾಗ ಕಷ್ಟಪಟ್ಟು ನೀವು ಅದನ್ನು ಹೊರ ಜಗತ್ತಿಗೆ ಅರ್ಪಿಸಿರುತ್ತೀರಿ.. ನಾನು ಅದನ್ನು ಉಚಿತವಾಗಿ ಪಡೆಯುವುದು ಶೋಭೆ ಎಲ್ಲ.. ನಾನು ಫ್ರೀ ಆಗಿ ಪಡೆದರೆ ಪುಸ್ತಕಕ್ಕೇ ಅವಮಾನ ಅಂತಾ ಹೇಳಿದ್ರು. ಬಳಿಕ ಅದರ ಬೆಲೆ ಎಷ್ಟು ಅಂತಾ ಕೇಳಿ ತಮ್ಮ ಸಿಬ್ಬಂದಿಗೆ ಪುಸ್ತಕದ ಹಣವನ್ನು (₹4500) ಛಾಯಾಗ್ರಾಹಕರ ಅಕೌಂಟ್​ಗೆ ಹಾಕುವಂತೆ ಸೂಚಿಸಿದ್ರು. ಇದಕ್ಕೆ ಅಲ್ವಾ ತುಂಬಿದ ಕೊಡ ತುಳುಕುವುದಿಲ್ಲ ಅನ್ನೋದು..? ಇಷ್ಟೊಂದು ಸರಳತೆಯನ್ನ ಮೈಗೂಡಿಸಿಕೊಂಡಿರುವ ಸುಧಾಮೂರ್ತಿ ನಮ್ಮ ಹೆಮ್ಮೆಯ ಕನ್ನಡತಿ ಅನ್ನುವುದೂ ನಮ್ಮ ಗರ್ವಕ್ಕೆ ಸಿಗುವ ಮತ್ತೊಂದು ಗರಿ..

-ವಿಶೇಷ ಬರಹ: ಸುಧಾಕರ್​ ​