ಚಪ್ಪಲಿ ಹಾಕಲ್ಲ, ಮಾತೇ ಆಡಲ್ಲ, ಮೌನದಲ್ಲೇ ಸಿಡಿಯುವ ಈ ಅಭ್ಯರ್ಥಿ ಜೀವನವೇ ಹೋರಾಟ..!

ಜನರ ಸಮಸ್ಯೆಗಳ ವಿರುದ್ಧದ ಹೋರಾಟವೇ ಇವರ ಬದುಕು.. ಮೌನದ ಮೂಲಕ ದೇಶದ ಸಂಕಷ್ಟಗಳ ಕಥೆ ಹೇಳುತ್ತ ಜೀವನ ಮುಡಿಪಿಟ್ಟ ಸರದಾರರು.. ಪಕ್ಕಾ ತಮ್ಮ ಸಿದ್ಧಾಂತದ ಮೇಲೆ ನಂಬಿಕೆಯಿಟ್ಟು, ತಾವು ನಂಬಿರುವ ಸಿದ್ಧಾಂತದ ಮೂಲಕವೇ ಬದುಕನ್ನ ಹಸನುಗೊಳಿಸಬೇಕು ಅಂತಾ ಕನಸು ಕಂಡವರು. ಕನಸು ನನಸಾಗೋವೆರಗೂ ಹೋರಾಟವೇ ನನ್ನುಸಿರು ಎನ್ನುತ್ತಾ ಸಾಗಿದವರು ಅಂಬ್ರೋಸ್​​ ಡಿ ಮೆಲ್ಲೋ.

ಬಹುಶಃ ಅಂಬ್ರೋಸ್​ ಡಿ. ಮೆಲ್ಲೋ ಹೋರಾಟಕ್ಕಾಗಿಯೇ ಹುಟ್ಟಿದವರು ಅನ್ನಿಸುತ್ತೆ. ಮಂಗಳೂರು ಮೂಲದ ಪುತ್ತೂರಿನವರಾಗಿರುವ ಇವ್ರ ಹೋರಾಟದ ಕಥೆ ನಿಜಕ್ಕೂ ರೋಚಕ. ಇವ್ರ ಬಗ್ಗೆ ಹೇಳುವ ಕಥೆಗಳೆಲ್ಲಾ ಕೇಳುಗರಿಗೆ ವಿಚಿತ್ರ ಎನಿಸಬಹುದು. ಆದ್ರೆ ಇವ್ರು ಮಾಡಿರುವ ಪ್ರತಿಯೊಂದು ಹೋರಾಟದಲ್ಲೂ ನೋವಿನ ಕಥೆ ಇದೆ. ಕಮ್ಯುನಿಸ್ಟ್​ ಸಿದ್ಧಾಂತದ ಮೇಲೆ ಆಳವಾಗಿ ನಂಬಿಕೆ ಇಟ್ಟು ಸಾಗುತ್ತಿರುವ ಇವರ ಪ್ರತಿಯೊಂದು ಉಸಿರೂ ಕೂಡ ದೇಶದ ಸಮಸ್ಯೆಗಳ ವಿರುದ್ಧವೇ.

ಇವತ್ತಿನ ದಿನಗಳಲ್ಲಿ ಸಿದ್ಧಾಂತ ಅಂದ್ರೆ ಅದು ಒಂದು ಪಕ್ಷಕ್ಕೆ ಸೀಮಿತವಾಗುತ್ತಿದೆ. ಸಿದ್ಧಾಂತದ ಹೆಸ್ರಲ್ಲಿ ನಡೀತಿರುವ ಹೋರಾಟಗಳೆಲ್ಲವೂ ಕೊನೆಗೆ  ಕಾಂಗ್ರೆಸ್​, ಬಿಜೆಪಿ, ರಾಹುಲ್, ಮೋದಿ, ಪಾಕಿಸ್ತಾನ ಅನ್ನೋವಲ್ಲಿಗೆ ಬಂದು ಮುಟ್ಟುವಂತಾಗಿದೆ. ಆದ್ರೆ, ಅಂಬ್ರೋಸ್​ ಹಾಗಲ್ಲ. ಅಂದ್ಹಾಗೆ ಈಗ ಯಾಕೆ ಹಿರಿಯ ಜೀವಿಯೊಬ್ಬರ ಬಗ್ಗೆ ಹೇಳುತ್ತಿದ್ದೇವೆ ಅಂದ್ರೆ, ಲೋಕಸಭೆ ಚುನಾವಣೆಗೆ ಇಂದಿನಿಂದ ಮತದಾನ ಶುರುವಾಗಿದೆ. ರಾಜಕೀಯ ಪಕ್ಷಗಳು ತಮ್ಮ ಗೆಲುವಿಗಾಗಿ ಚುನಾವಣಾ ಕಸರತ್ತು ನಡೆಸ್ತಿವೆ. ಕೆಲವೆಡೆ ಕೀಳು ಮಟ್ಟದ ರಾಜಕೀಯವೂ ನಡೆಯುತ್ತಿದೆ.

ಆದ್ರೆ ಅಂಬ್ರೋಸ್​ ಡಿ ಮೆಲ್ಲೋ ಮಾತ್ರ ಡಿಫ್ರೆಂಟ್​. 2014ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದು ಅಂಬ್ರೋಸ್ ದೇಶದ ಗಮನ ಸೆಳೆದಿದ್ದರು. ಈಗಲೂ ಕೂಡ ತಮ್ಮ ಹೋರಾಟವನ್ನ ಮುಂದುವರಿಸಿದ್ದು, ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ದಾರೆ.

ಅಬ್ಬರದ ಪ್ರಚಾರವಿಲ್ಲ, ಹಣ, ಹೆಂಡದ ಹೊಳೆ ಹರಿಸಲ್ಲ. ನನ್ನ ಮೊದಲಿನ ಹೋರಾಟದ ಮೂಲಕವೇ ಮತ ಕೇಳುತ್ತಿದ್ದೀನಿ. ನನಗೆ ವೋಟ್ ಕೊಡಿ. ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಅಂತಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನ ಸುತ್ತುತ್ತಿದ್ದಾರೆ ಅಂಬ್ರೋಸ್​ ಡಿ. ಮೆಲ್ಲೋ.

16 ವರ್ಷಗಳಿಂದ ಚಪ್ಪಲಿ ಹಾಕಿಲ್ಲ 
ನಾಡಿನ ಸಮೃದ್ಧಿಯೇ ನನ್ನ ಉಸಿರು ಅಂತಾ ಪಣ ತೊಟ್ಟಿರುವ ಇವರದ್ದು ಏಕಾಂಗಿ ಹೋರಾಟ. 16 ವರ್ಷಗಳಿಂದ ಕಾಲಿಗೆ ಚಪ್ಪಲಿ ಹಾಕದೇ ನಿರಂತರವಾಗಿ ಶ್ರಮ ಪಡುತ್ತಿದ್ದಾರೆ. ಸರ್ಕಾರ ಹಾಗೂ ರಾಜಕೀಯದ ವಿರುದ್ಧ ಇವರ ಹೋರಾಟವೇ ಒಂದು ಅದ್ಭುತ.

ಶೌಚಾಲಯದ ನೀರು ಸೇವನೆ..
14 ವರ್ಷ ವನವಾಸ ಮಾಡಿರುವ ಕಥೆಯನ್ನ ನಾವು ಪುರಾಣಗಳಲ್ಲಿ ಕೇಳಿದ್ದೇವೆ. ನೀರಿನ ವ್ಯಾಪಾರೀಕರಣವನ್ನ ಖಂಡಿಸುತ್ತಿರುವ ಇವರು, 14 ವರ್ಷದಿಂದ ಸಂಪೂರ್ಣ ಮೌನಿಯಾಗಿದ್ದಾರೆ. ಯಾರ ಬಳಿಯೂ ಒಂದೂ ಮಾತನ್ನಾಡದೇ, ನೀರು ಹಾಗೂ ಆಹಾರವನ್ನ ಹಗಲಿನಲ್ಲಿ ಸೇವನೆ ಮಾಡದೇ, ಸಂಜೆ ಶೌಚಾಲಯದ ನೀರನ್ನ ಸೇವಿಸಿ ಬದುಕುತ್ತಿದ್ದಾರೆ.

ಹಳೆಯ ನೋಟುಗಳ ಬಳಕೆ
ಕೇಂದ್ರ ಸರ್ಕಾರದ ನೋಟ್​ ಬ್ಯಾನ್​ ಖಂಡಿಸಿರುವ ಇವರು ಈಗಲೂ ಹಳೇ ನೋಟುಗಳನ್ನ ಬಳಸುತ್ತಿದ್ದಾರೆ. ದೇಶ ಹಾಗೂ ರಾಜ್ಯದಲ್ಲಿ ಯಾವುದೇ ಚುನಾವಣೆಗಳು ನಡೆದರೂ ಸ್ಪರ್ಧಿಸುವ ಇವರು, ಚುನಾವಣಾ ಆಯೋಗಕ್ಕೆ ಡೆಪಾಸಿಟ್​ ಇಡುತ್ತಿರುವ ನೋಟುಗಳೆಲ್ಲವೂ ಹಳೇ ನೋಟುಗಳು. ಅದ್ರಂತೆ ಮೊನ್ನೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಇವರು ಚುನಾವಣಾ ಆಯೋಗಕ್ಕೆ ತಮ್ಮ ಹಳೇ ನೋಟುಗಳನ್ನೇ ನೀಡಿದ್ದಾರೆ.

ಪುಸ್ತಕ ಮಾರಿ ಠೇವಣಿ..!
ಪುಸ್ತಕಗಳನ್ನ ಮಾರಾಟ ಮಾಡಿ ಅದರಿಂದ ಬದುಕುತ್ತಿರುವ ಇವರು, ಈ ಬಾರಿ ಚುನಾವಣೆಯಲ್ಲಿಯೂ ಸಹ ಪುಸ್ತಕಗಳ ಮಾರಾಟದಿಂದ ಗಳಿಸಿದ ಹಣದಿಂದ ಠೇವಣಿ ಇಟ್ಟಿದ್ದಾರೆ. ಕೆಲವು ಸಾಹಿತಿಗಳಿಂದ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನ ಖರೀದಿಸಿ, ಅವುಗಳನ್ನ ಮಾರಾಟ ಮಾಡಿ ಠೇವಣಿ ಇಟ್ಟಿದ್ದಾರೆ. ಅಂದ್ಹಾಗೆ ಈ ಬಾರಿಯ ಚುನಾವಣೆಯಲ್ಲಿ₹ 25 ಸಾವಿರ ರೂಪಾಯಿ ಠೇವಣಿ ಇಟ್ಟಿರುವ ಅಂಬ್ರೋಸ್​ ಡಿ. ಮೆಲ್ಲೋ, ಮೊದಲು 22 ಸಾವಿರ ರೂಪಾಯಿ ಮಾತ್ರ ಇಟ್ಟಿದ್ದರು. ನಂತರ ಚುನಾವಣಾ ಆಯೋಗದಿಂದ ಕಾಲಾವಕಾಶ ಕೇಳಿ, ಐದು ದಿನಗಳ ಬಳಿಕ ಮತ್ತೆ ಒಂದಿಷ್ಟು ಪುಸ್ತಕಗಳನ್ನ ಮಾರಿ 3000 ರೂಪಾಯಿ ಕಟ್ಟಿದ್ದಾರೆ ಎನ್ನಲಾಗಿದೆ.

ಚುನಾವಣಾ ಜೀವನ
2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ಇವರು ಸ್ಪರ್ಧೆ ಮಾಡಿದ್ದರು. 2013 ರಲ್ಲಿ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಿಂದ, 2015ರಲ್ಲಿ ಶಿಕಾರಿಪುರ, 2017 ರಲ್ಲಿ ಹೆಬ್ಬಾಳ, 2018 ರಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv