ಸಿದ್ದರಾಮಯ್ಯನವರ ಯೋಜನೆಗಳ ತಲೆ, ಬಾಲ ಕಟ್​ ಮಾಡಿದ್ದಾರೆ- ಆಯನೂರು​ ವ್ಯಂಗ್ಯ

ಬೆಂಗಳೂರು: ವಿಧಾನ ಮಂಡಲದ ಉಭಯ ಸದನದಲ್ಲಿ ಚರ್ಚೆ ಮುಂದುವರೆದಿದೆ. ಪರಿಷತ್​​ನ ಬಜೆಟ್​ ಮೇಲಿನ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ವಿಧಾನ ಪರಿಷತ್​​​​​​​​​​ ಸದಸ್ಯ ಆಯನೂರು ಮಂಜುನಾಥ್​​ ಉಭಯ ಪಕ್ಷಗಳ ಕಾಲೆಳೆದರು. ಮಾಜಿ ಸಿ.ಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಆ ಬಜೆಟ್​​​ಗೆ ಪೂರಕ ಬಜೆಟ್ ಮಂಡನೆ ಮಾಡಿದ್ದರೆ ಸಾಕಿತ್ತು ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಕುಮಾರಸ್ವಾಮಿ ಹೈಕಮಾಂಡ್​​​ವರೆಗೂ ಹೋಗಿ ಕಾಡಿ-ಬೇಡಿ ಬಜೆಟ್ ಮಂಡನೆ ಮಾಡಿದ್ದಾರೆ ಎಂದರು. ಎರಡು ಪಕ್ಷಗಳ ಪ್ರಣಾಳಿಕೆ, ಎರಡು ಪಕ್ಷಗಳ ಬಜೆಟ್ ಇಟ್ಟುಕೊಂಡು ಮಾತಾಡಬೇಕು ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.
ಹಳೆಯ ಬಜೆಟ್ ಮುಂದುವರಿಸಿದ್ದೇನೆ ಎಂದಿದ್ದಾರೆ. ಯಾವ ಯೋಜನೆಗಳನ್ನ ಮುಂದುವರೆಸಿದ್ದಾರೆ ಅನ್ನೋದನ್ನ ಹೇಳಿಲ್ಲ ಎಂದರು. ಅಲ್ಲದೇ ನೀವು ಸಿದ್ದರಾಮಯ್ಯನವರ ಯೋಜನೆಗಳಲ್ಲಿ ತಲೆ ಬಾಲ ಕಟ್ ಮಾಡಿದ್ದೀರಿ ಅಂತಾ ಛೇಡಿಸಿದರು. ಈ ವೇಳೆ ಮಂಜುನಾಥ್​ ಅವರ ಬಾಲ ಕಟ್ ಮಾಡಿದ್ದಾರೆ ಎಂಬ ಪದಕ್ಕೆ ಸದಸ್ಯ ವೀಣಾ ಅಚ್ಚಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಏಳು ಕೆಜಿಯಲ್ಲಿ ಎರಡು ಕೆ.ಜಿ ಕಟ್ ಮಾಡಿದ್ರೆ, ಇದು ಯಾರ ಭಾಗ್ಯ? ನರೇಂದ್ರ ಮೋದಿ ಭಾಗ್ಯ ಅಂತ ಹೆಸರು ಇಟ್ಟುಕೊಳ್ಳಬೇಕು ಅಭಿಪ್ರಾಯಪಟ್ಟರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಚಿವ ಯು.ಟಿ ಖಾದರ್ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಕ್ಕೂ ಮುನ್ನಾ ರಾಜ್ಯ ಸರ್ಕಾರ ಅಕ್ಕಿ ಖರೀದಿ ಮಾಡಿ ಕೊಡುತ್ತಿವೆ ಎಂದು ತಿಳಿಸಿದರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv