ಪ್ರಧಾನಿ ಮೋದಿ‌ ರೈತರು, ಯುವಕರಿಗೆ ದ್ರೋಹ ಮಾಡಿದ್ದಾರೆ: ಸಿದ್ದರಾಮಯ್ಯ

ಹಾಸನ: ಪ್ರಧಾನಿ ಮೋದಿ‌ ರೈತರು, ಯುವಕರಿಗೆ ದ್ರೋಹ ಮಾಡಿದ್ದಾರೆ. ಅವರು ಮತ್ತೆ ಪಿಎಂ‌ ಆಗಬಾರದು ಎಂದು ಸಿದ್ದರಾಮಯ್ಯ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಹಾಸನ ಲೋಕಸಭೆ ಕ್ಷೇತ್ರದ ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡುವ ವೇಳೆ ಮಾತನಾಡಿದ  ಅವರು, ಮಳೆ ಬರುವುದು ಯಾವಾಗಲೂ ಶುಭ ಸಂಕೇತ. ರೈತರಿಗೆ ಮಳೆ ಬಂದಾಗ ಆಗೋ ಖುಷಿಯೇ ಬೇರೆ.  ಈ ಸಾರಿ‌ ಮುಂಗಾರು ಚೆನ್ನಾಗಿ ಆಗಲಿ ಎಂದು ಮಳೆರಾಯನಲ್ಲಿ ಪ್ರಾರ್ಥನೆ ಮಾಡುತ್ತೇನೆ. ನಮ್ಮ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಆಶೀರ್ವಾದ ಮಾಡಿ. ನಾವು ಜೆಡಿಎಸ್ ಅನೇಕ ವರ್ಷಗಳಿಂದ ಎಲ್ಲಾ ಚುನಾವಣೆಯಲ್ಲಿ ಹೋರಾಟ ಮಾಡಿದ್ದೇವೆ. ಈ ಸಾರಿ ಮೋದಿ‌ ಪ್ರಧಾನಿ ಆಗದಂತೆ ಸೋಲಿಸಲು ಮೈತ್ರಿ ಮಾಡಿಕೊಂಡಿದ್ದೇವೆ. ನರೇಂದ್ರ ಮೋದಿ 5 ವರ್ಷ ಆಡಳಿತ ನಡೆಸಿದ್ದಾರೆ. ಆದ್ರೆ ಅವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ, ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮೋದಿ ಈ ದೇಶ ಕಂಡ ಮಹಾನ್ ಸುಳ್ಳುಗಾರ. ಉದ್ಯೋಗ ಕೊಡಲಿಲ್ಲ, ವಿದೇಶದಿಂದ ಕಪ್ಪುಹಣ ತರಲಿಲ್ಲ. ಅಚ್ಛೇ ದಿನ್ ರೈತರು ಸೇರಿ ಯಾರಿಗೂ ಬರಲಿಲ್ಲ. ಆದ್ರೆ ಅಚ್ಛೇ ದಿನ್ ಬಂದಿದ್ದು ಅಂಬಾನಿ, ಅದಾನಿ, ವಿಜಯ ಮಲ್ಯರಿಗೆ ಎಂದರು.

ಈಶ್ವರಪ್ಪ ನಾಲಗೆ ಮತ್ತು ಮೆದುಳಿಗೆ ಲಿಂಕ್ ಕಟ್ ಆಗಿದೆ
ಶಾಸಕ ಕೆ.ಎಸ್​ ಈಶ್ವರಪ್ಪ ನಾಲಗೆ ಮತ್ತು ಮೆದುಳಿಗೆ ಲಿಂಕ್ ಕಟ್ ಆಗಿದೆ. 28 ಸ್ಥಾನಗಳಲ್ಲಿ ಒಬ್ಬ ಕುರುಬರಿಗೂ ಟಿಕೆಟ್ ಕೊಡಿಸಿಲ್ಲ. ಇಂಥವನು ರಾಜಕೀಯದಲ್ಲಿ ಇರಬೇಕಾ ಎಂದು ಎಕವಚನದಲ್ಲಿ ಈಶ್ವರಪ್ಪ  ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಇನ್ನು ಯಾವುದೇ ಕಾರಣಕ್ಕೂ ದಲಿತರು, ಹಿಂದುಳಿದ ವರ್ಗದವರು, ಅಲ್ಪ ಸಂಖ್ಯಾತರು ಬಿಜೆಪಿಗೆ ಮತ ಹಾಕಬಾರದು ಎಂದು ಅವರು ಹೇಳಿದರು.

ಎ.ಮಂಜು ಪಕ್ಷ ದ್ರೋಹ ಮಾಡಿದ್ದಾನೆ
ಹಾಸನ ಬಿಜೆಪಿ ಲೋಕಸಭೆ ಅಭ್ಯರ್ಥಿ ಎ.ಮಂಜುವನ್ನ ಈ ಹಿಂದೆ ಶಾಸಕನನ್ನಾಗಿ, ಮಂತ್ರಿಯಾಗಿ ಮಾಡಿದೆ. ಆದರೀಗ ಪಕ್ಷ ದ್ರೋಹ ಮಾಡಿದ್ದಾನೆ. ನಿನ್ನ ಮಂತ್ರಿ ಮಾಡಿದ್ದು ಈ ಸಿದ್ದರಾಮಯ್ಯ, ರಾಹುಲ್ ಗಾಂಧಿ. ಆದ್ರೆ ಈಗ ಕಾಂಗ್ರೆಸ್​ಗೆ ಮೋಸ ಮಾಡಿ, ಮೋದಿ ಪ್ರಧಾನಿ‌ ಮಾಡಲು ಹೋಗಿರುವ ನಿನಗೆ ಧಿಕ್ಕಾರ ಅಂತಾ ಸಿದ್ದರಾಮಯ್ಯ ಕಿಡಿಕಾರಿದ್ರು. ಇನ್ನು ಯಾವುದೇ  ಕಾರಣಕ್ಕೂ  ಮಂಜುಗೆ ಜನರು ಮತ ಹಾಕದೇ, ಪ್ರಜ್ವಲ್ ಬೆಂಬಲಿಸಿ ಎಂದು ಇದೇ ವೇಳೆ ಸಿದ್ದರಾಮಯ್ಯ ಜನರಲ್ಲಿ ಮನವಿ ಮಾಡಿದರು.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv