ನಿಮ್ಮ ಬಗ್ಗೆ ಸದನದ ಯಾವ ಸದಸ್ಯರಿಗೂ ಅನುಮಾನವಿಲ್ಲ-ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ‘ಆಡಿಯೋ ವಾರ್’ ಜೋರಾಗಿದೆ. ಸ್ಪೀಕರ್ ರಮೇಶ್​ ಕುಮಾರ್ ಈ ವಿಚಾರದ ಮೇಲೆ ಚರ್ಚೆಗೆ ಆಹ್ವಾನ ಮಾಡಿಕೊಟ್ಟಿದ್ದಾರೆ. ಚರ್ಚೆ ವೇಳೆ ಮಾತನಾಡಿದ ಸ್ಪೀಕರ್ ರಮೇಶ್​ ಕುಮಾರ್, ಆಡಿಯೋದಲ್ಲಿ ತಮ್ಮ ಹೆಸರು ಕೂಡ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ನನಗೆ ಘಾಸಿಯಾಗಿದೆ. ನಿಮಗೆ ನಮ್ಮ ಮೇಲೆ ಅನುಮಾನವಾ..? ಯಾಕೆ ಸುಮ್ಮನೆ ಕೂತಿದ್ದೀರಾ..? ನನ್ನ ಬಗ್ಗೆ ಸಹಾನುಭೂತಿ ಇಲ್ಲವಾ..? ಅಂತಾ ಕೇಳಿದರು. ಆಗ ಸಿದ್ದರಾಮಯ್ಯ ಎದ್ದು ನಿಂತು, ನನಗೆ ನಿಮ್ಮ ಬಗ್ಗೆ ಎಳ್ಳಷ್ಟೂ ಅನುಮಾನವಿಲ್ಲ. ನಾನು ನಿಮ್ಮ ,ವೈಯಕ್ತಿಕ, ಸಾರ್ವಜನಿಕ, ರಾಜಕೀಯ ಜೀವನದಲ್ಲಿ ಹೇಗೆ ಬದುಕಿದ್ದೀರಿ ಅನ್ನೋದನ್ನ ಬಹಳ ಹತ್ತಿರದಿಂದ ನೋಡಿದ್ದೇನೆ. ಈಗ ಇಲ್ಲಿ ಚರ್ಚೆಯಾಗುತ್ತಿರುವ ವಿಚಾರ ಬಹಳ ಗಂಭೀರವಾಗಿದೆ. ಇದು ಯಾರೋ ಮಾತನಾಡಿರೋದಲ್ಲ. ಇದನ್ನ ಹಗುರವಾಗಿ ಪರಿಗಣಿಸುವ ವಿಚಾರವಲ್ಲ. ಜನರಿಂದ ಆಯ್ಕೆಯಾಗಿ ಬಂದಿರುವ ಸದಸ್ಯರೇ ಮಾತನಾಡಿರೋದು. ಈ ಸ್ಥಾನದ ಗೌರವವನ್ನ ಎತ್ತಿ ಹಿಡಿಯುವುದು ನಮ್ಮೆಲ್ಲರ ಜವಾಬ್ದಾರಿ. ಸತ್ಯ ಎಲ್ಲರಿಗೂ ಗೊತ್ತಾಗಬೇಕು. ಧ್ವನಿ ಸುರುಳಿಯಲ್ಲಿ ಬಹಳ ಸ್ಪಷ್ಟವಾಗಿದೆ. ಇದು ಅತ್ಯಂತ ಗಂಭೀರವಾದ ವಿಚಾರ. ಇದು ಇಡೀ ರಾಷ್ಟ್ರವ್ಯಾಪಿ ಸುದ್ದಿಯಾಗಿದೆ. ಈ ವಿಚಾರವಾಗಿ ಸಮಗ್ರ ತನಿಖೆಯಾಗಬೇಕು. ನಿಮ್ಮ ಬಗ್ಗೆ ನನಗೆ ವೆರಿ ಕ್ಲಿಯರ್​. ನಿಮ್ಮ ಬಗ್ಗೆ ಸದನದ ಯಾವ ಸದಸ್ಯರಿಗೂ ಅನುಮಾನವಿಲ್ಲ. ನಿಮ್ಮ ವಿರುದ್ಧ ಬೆರಳು ತೋರಿಸುವ ಶಕ್ತಿ, ಧೈರ್ಯ ಸದನದಲ್ಲಿ ಯಾರಿಗೂ ಇಲ್ಲ ಅಂತಾ ಹೇಳಿದರು.

ಇದಕ್ಕೂ ಮೊದಲು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ‘ಆಪರೇಷನ್ ಕಮಲ’ಕ್ಕೆ ಸಂಬಂಧಿಸಿದ ಆಡಿಯೋದಲ್ಲಿ ಸ್ಪೀಕರ್ ಹೆಸರು ಪ್ರಸ್ತಾಪವಾಗಿರುವುದರಿಂದ, ಇಡೀ ಪ್ರಕರಣದ ಬಗ್ಗೆ ಸಮಗ್ರ ರೂಪದ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಇಡೀ ದೇಶಕ್ಕೆ ಸಂದೇಶ ರವಾನೆಯಾಗಬೇಕು ಅಂತಾ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv