ಮೋದಿ, ಶಾಗೆ ಮಲ್ಲಿಕಾರ್ಜುನ ಖರ್ಗೆ ಮೇಲೆ ಹೆದರಿಕೆ ಇದೆ -ಸಿದ್ದರಾಮಯ್ಯ

ಕಲಬುರ್ಗಿ: ನರೇಂದ್ರ ಮೋದಿರವರಿಗೆ ಯಾರ ಮೇಲಾದರೂ ಹೆದರಿಕೆ ಇದ್ರೆ ಅದು ಮಲ್ಲಿಕಾರ್ಜುನ ಖರ್ಗೆ ಮೇಲೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜಿಲ್ಲೆಯ ಅಫಜಲಪುರ ‌ಪಟ್ಟಣದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಮಟ್ಟದ ನಾಯಕರು, 9 ಬಾರಿ ವಿಧಾನಸಭೆ, 2 ಬಾರಿ ಲೋಕಸಭೆಗೆ ಆಯ್ಕೆಯಾಗಿ 12ನೇ ಬಾರಿ ನಿಮ್ಮ ಮುಂದೆ ಬಂದಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಸತತವಾಗಿ 11 ಬಾರಿ ಚುನಾವಣೆಯಲ್ಲಿ ಆರಿಸಿ ಬಂದವರು ಇವರು. 5 ವರ್ಷ ಸಂಸತ್‌ನಲ್ಲಿ ವಿಪಕ್ಷ ನಾಯಕರಾಗಿ ನರೇಂದ್ರ ಮೋದಿ ವೈಫಲ್ಯ, ಭ್ರಷ್ಟಾಚಾರ ಬಯಲು ಮಾಡುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಹೀಗಾಗಿ ಮೋದಿ, ಅಮಿತ್ ಶಾ ಹೆದರಿಕೆಯಿಂದ ಹೇಗಾದರೂ ಮಾಡಿ ಮಲ್ಲಿಕಾರ್ಜುನ ಖರ್ಗೆರನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿದ್ರೆ ನಿಮಗೆ ಗೌರವ ಸಿಗುತ್ತೆ. ಆ ಜಾಧವ್ ಬಂದ್ರೆ ಏನ್‌ ಸಿಗುತ್ತೆ. ನಾನು ಎಷ್ಟು ಸಹಾಯ ಮಾಡಿದ್ದೆ ಅವನಿಗೆ, ಚೆನ್ನಾಗಿದಾನೆ ಅಂದುಕೊಂಡಿದ್ದೆ. ಅವನು ಗೋಮುಖ ವ್ಯಾಘ್ರ, ನಿಯತ್ತೆ ಇಲ್ಲ. ನನ್ನ ಹತ್ರ ಖರ್ಗೆನ, ಅವರ ಮಗನ್ನ ಬೈಕೊಂಡ ಬರೋನು, ಯಾಕಪ್ಪ ಹೀಗ್ ಮಾಡ್ತೀಯಾ ಅಂದಿದ್ದೆ. ಮುಂದೆ ಸಚಿವನಾಗಿ ಮಾಡ್ತೀನಿ ಅಂದಿದ್ದೆ, ಬಿಜೆಪಿಗೆ ಯಾವ ಆಮಿಷಕ್ಕೆ ಬಲಿಯಾದನೋ ಗೊತ್ತಿಲ್ಲ ಅಂತಾ ಡಾ.ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ್ರು.

‘ಸಂವಿಧಾನದ ರಕ್ಷಣೆಗಾಗಿ ಈ ಚುನಾವಣೆ ಮಹತ್ವದ್ದು’
ಇದೇ ವೇಳೆ, ಮೋದಿ ಮುಖ ನೋಡಿ ವೋಟ್ ಕೊಡ್ರಿ ಅಂತಾರೆ.. ಏನ್ ನೋಡೋದು.. ಇಲ್ಲಿ ನಿಂತ ಅಭ್ಯರ್ಥಿ ಏನು ಕೆಲಸ ಮಾಡಿ ತೋರಿಸಿದ್ದಾರೆ ಅದನ್ನು ನೋಡಿ ಮತ ಕೂಡಿ. ಮೋದಿ ಅಧಿಕಾರಕ್ಕೆ ಬಂದ್ರೆ ಪ್ರಜಾಪ್ರಭುತ್ವವೂ ಹೋಗ್ತದೆ, ಸಂವಿಧಾನವು ಹೋಗ್ತದೆ. ಸಂವಿಧಾನದ ರಕ್ಷಣೆಗಾಗಿ ಈ ಚುನಾವಣೆ ಮಹತ್ವದ್ದಾಗಿದೆ. ಜೆಡಿಎಸ್‌ನವರು ನಮ್ಮ ಜೊತೆ ಇದ್ದಾರೆ. ಹೀಗಾಗಿ ಈ ಬಾರಿ ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ 25 ಸಾವಿರ ಲೀಡ್ ಬರುವ ವಿಶ್ವಾಸವಿದೆ ಅಂತಾ ಕಲಬುರ್ಗಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪ್ರಚಾರ ಸಭೆಯಲ್ಲಿ ಸಚಿವ ಎಂ.ಸಿ.ಮನಗೂಳಿ, ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ರು.