ನಾಲ್ವರು ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್​ಗೆ ಕಂಪ್ಲೆಂಟ್​

ಬೆಂಗಳೂರು: ಕೊನೆಗೂ ಕಾಂಗ್ರೆಸ್ ನಾಯಕರು ರಮೇಶ್ ಜಾರಕಿಹೋಳಿ ಟೀಂ ವಿರುದ್ಧ ವಿಧಾನಸಭೆ ಸ್ಪೀಕರ್​ಗೆ ದೂರು ನೀಡಿದ್ದಾರೆ. ಇಂದು ಸ್ಪೀಕರ್ ರಮೇಶ್ ಕುಮಾರ್ ಅವರ ಕೊಠಡಿಗೆ ಭೇಟಿ ನೀಡಿ ದೂರು ನೀಡಿದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ ರೆಬಲ್ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಉಮೇಶ್ ಜಾಧವ್ ಹಾಗೂ ಮಹೇಶ್ ಕಮಟಳ್ಳಿ ವಿರುದ್ಧ ದೂರು ಸಲ್ಲಿಸಿದ್ದಾರೆ.

ಈ ನಾಲ್ವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಪಕ್ಷದಲ್ಲಿ ಕರೆದ ಶಾಸಕಾಂಗ ಪಕ್ಷದ ಸಭೆ ಸೇರಿದಂತೆ ಕಳೆದ ಎರಡು ತಿಂಗಳಿಂದ ಎಲ್ಲೂ ಗುರುತಿಸಿಕೊಂಡಿಲ್ಲ. ಹೀಗಾಗಿ ನಾನು ಶಾಸಕಾಂಗ ಪಕ್ಷದ ನಾಯಕನಾಗಿ ನಾಲ್ವರನ್ನು ಅನರ್ಹಗೊಳಿಸಲು ಪಕ್ಷದೊಳಗೆ ಚರ್ಚಿಸಿದ್ದೇನೆ. ಇದಕ್ಕೆ ಎಲ್ಲರ ಒಪ್ಪಿಗೆ ತೆಗೆದುಕೊಂಡಿದ್ದೇನೆ. ನಿಮ್ಮ ಬಳಿ ಈ ವಿಚಾರ ಪ್ರಸ್ತಾಪಿಸುತ್ತಿದ್ದೇನೆ. ತಾವು ಮಧ್ಯಾಹ್ನದೊಳಗೆ ಇದಕ್ಕೆ ಒಪ್ಪಿಗೆ ನೀಡಿ ಎಂದು ಸಿದ್ದರಾಮಯ್ಯ ಕೇಳಿಕೊಂಡಿದ್ದಾರೆ.

ಮೂರು ಬಾರಿ ವಿಪ್ ‌ಹೊರಡಿಸಿದರೂ ಕ್ಯಾರೇ ಎನ್ನದ ಅತೃಪ್ತ ಶಾಸಕರು, ಬಜೆಟ್ ಅಧಿವೇಶನಕ್ಕೂ ಹಾಜರಾಗದೇ ಪಕ್ಷದ ಶಿಸ್ತು ಉಲ್ಲಂಘಿಸಿರೋ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಸ್ಪೀಕರ್​​​ ರಮೇಶ್​​ ಕುಮಾರ್​​, ಸಿದ್ದರಾಮಯ್ಯರ ಪ್ರಸ್ತಾಪವನ್ನು ಆಲಿಸಿದ್ದು, ಮಧ್ಯಾಹ್ನದೊಳಗೆ ಅವರ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.