‘ನಮಗೆ ಶ್ರೀಗಳ ಆರೋಗ್ಯವಷ್ಟೇ ಮುಖ್ಯ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ’

ತುಮಕೂರು: ಸಿದ್ದಗಂಗಾ ಮಠದ ಹಿರಿಯ ಶ್ರೀಗಳ ಆರೋಗ್ಯದ ಬಗ್ಗೆ ಹಲವು ವದಂತಿಗಳು ಹಬ್ಬಿವೆ. ಅವರು ಉತ್ತಾರಾಯಣ ಕಾಲ ಕಾಯುತ್ತಿದ್ದಾರೆ. ದಕ್ಷಿಣ ಕಾಲ ಕಾಯುತ್ತಿದ್ದಾರೆ ಅಂತೆಲ್ಲಾ ಹೇಳಲಾಗುತ್ತಿದೆ. ಇನ್ನು ಕೆಲವರು ಹಾಗೆಲ್ಲಾ ಏನೂ ಆಗಿಲ್ಲ. ಇನ್ನೂ ನಾಲ್ಕೈದು ದಿನ ಏನೂ ಆಗೋಲ್ಲ ಅಂತಾನೂ ವದಂತಿ ಇದೆ. ಆದ್ರೆ ನಮಗೆ ಯಾವ ಕಾಲವೂ ಬೇಕಿಲ್ಲ. ನಮಗೆ ಎಲ್ಲಾ ಕಾಲ ಒಳ್ಳೆಯದೇ. ನಿಮ್ಮೆಲ್ಲರ ಪ್ರಾರ್ಥನೆಯಿಂದ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಆಗಿದೆ ಎಂದು ಮಠದ ಕಿರಿಯ ಶ್ರೀಗಳು ವದಂತಿಗಳನ್ನ ಅಲ್ಲಗಳೆದಿದ್ದಾರೆ.

ಸಂಜೆ ಪ್ರಾರ್ಥನೆಯ ನಂತರ ಮಾತನಾಡಿರುವ ಕಿರಿಯ ಶ್ರೀಗಳು, ನಿನ್ನೆಯಿಂದ ಹಲವು ಮಕ್ಕಳು ಪೂಜ್ಯರ ದರ್ಶನ ಮಾಡಿದ್ದಾರೆ. ಅವರಿಗೆಲ್ಲ ಸಮಾಧಾನ ಆಗಿದೆ ಅಂದುಕೊಳ್ಳುತ್ತೇನೆ. ಮಕ್ಕಳ ಮನಸ್ಸು ಪವಿತ್ರವಾದದ್ದು. ಮಕ್ಕಳು ಪವಿತ್ರ ಮನಸ್ಸಿನಲ್ಲಿ ಮಾಡಿದ ಪ್ರಾರ್ಥನೆ ಈಡೇರಲಿದೆ. ಯಾರೂ ಕೂಡಾ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಸತ್ಯಾಂಶವನ್ನ ತಿಳಿದುಕೊಳ್ಳಿ. ನಮಗೆ ಶ್ರೀಗಳ ಆರೋಗ್ಯವಷ್ಟೇ ಮುಖ್ಯ ಅಂತಾ ಹೇಳಿದರು. ಇದಕ್ಕೂ ಮುನ್ನ ಶ್ರೀಗಳಿಗಾಗಿ ಮಕ್ಕಳು ಮೌನವಾಗಿ ಪ್ರಾರ್ಥನೆ ಮಾಡಿದರು. ಪ್ರಾರ್ಥನೆಯಲ್ಲಿ ಕಿರಿಯ ಶ್ರೀಗಳೂ ಭಾಗಿಯಾಗಿದ್ರು.