‘ಕುಮಾರಸ್ವಾಮಿಗೆ ಎರಡು ನಾಲಿಗೆ’

ಬಳ್ಳಾರಿ: ಕುಮಾರಸ್ವಾಮಿಗೆ ಎರಡು ನಾಲಿಗೆ ಇದೆ. ಅವರು ಮತ್ತೊಮ್ಮೆ ವಚನಭ್ರಷ್ಟರಾಗುವ ಲಕ್ಷಣಗಳು ಸ್ಪಷ್ಟವಾಗಿವೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಕೇವಲ ಭಾವೋದ್ವೇಗದಲ್ಲಿ ಮಾತಾಡುತ್ತಿದ್ದಾರೆ. ಎರಡು ಹಂತದಲ್ಲಿ ರೈತರ ಸಾಲ ಮನ್ನಾ ಮಾಡ್ತೀನಿ ಅಂದಿದ್ದಾರೆ. ಸಮ್ಮಿಶ್ರ ಸರ್ಕಾರ ಮುಂದುವರೆದರೆ ಕಾಂಗ್ರೆಸ್, ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳಲಿವೆ ಎಂದರು.

ಸಿದ್ದರಾಮಯ್ಯನವರು 14 ಷರತ್ತುಗಳನ್ನು ಹಾಕಿ ಸಾಲ ಮನ್ನಾ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೇವಲ 250 ಕೋಟಿ ರೂ. ಸಾಲ ಮನ್ನಾ ಆಗಿದೆ. ಸದ್ಯದ ಸರ್ಕಾರ ಕಾಲಹರಣ ಮಾಡುತ್ತಿದೆ ವಿನಃ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಶ್ರೀರಾಮುಲು ಕಿಡಿಕಾರಿದ್ರು. ನನಗೆ ಜನರೇ ಹೈಕಮಾಂಡ್ ಎಂದ ಕುಮಾರಸ್ವಾಮಿ ಈಗ ಕಾಂಗ್ರೆಸ್ ಹೈಕಮಾಂಡ್ ಎನ್ನುತ್ತಿದ್ದಾರೆ.

ಸಾಲ ಮನ್ನಾ ಯಾಕೆ ವಿಳಂಬ ಆಗುತ್ತಿದೆ ಎಂಬುದನ್ನು ಸಿಎಂ ಜನಕ್ಕೆ ಸ್ಪಷ್ಟನೆ ನೀಡಬೇಕು. ಸಾಲ ಮನ್ನಾ ಆಗದಿದ್ದರೆ ಬಿಜೆಪಿಯ ಹೋರಾಟ ನಿರಂತರವಾಗಿ ನಡೆಯಲಿದೆ. ಮೊದಲ ಬಾರಿ ಸಿಎಂ ಆದಾಗ ಕುಮಾರಸ್ವಾಮಿ ಎಡವಿದ್ದಾರೆ. ಈಗ ಅವರು ಅನುಭವಸ್ಥರಾಗಿದ್ದಾರೆ. ಅವರಿಂದ ಮತ್ತೆ ಅದೇ ತಪ್ಪಾಗುವುದು ಬೇಡ. ಸಾಲ ಮನ್ನಾ ಆಗದಿದ್ದರೆ ನಮಗೆ ರಾಜಕೀಯ ಲಾಭ ಆಗಬಹುದು. ಆದರೆ ಅದು ನಮಗೆ ಬೇಕಾಗಿಲ್ಲ. ಸಾಲ ಮನ್ನಾ ವಿಳಂಬವಾದರೆ ರೈತರ ಆತ್ಮಹತ್ಯೆಗಳಾಗುವ ಸಂಭವ ಇದೆ ಎಂದರು.

ನಾವು ಕಾಯ್ತೀವಿ, ಆದ್ರೆ ಯಾವಾಗ ಸಾಲ ಮನ್ನಾ ಆಗುತ್ತೆ ಅಂತಾ ಹೇಳಿ
ನಾವು ಕಾಯ್ತೀವಿ. ಆದ್ರೆ ಯಾವಾಗ ಸಾಲ ಮನ್ನಾ ಆಗುತ್ತೆ ಅಂತಾ ಹೇಳಿ ಅಂತಾ ರಾಮುಲು ಸಿಎಂ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ರು. ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಬಹುತೇಕರು ಸಚಿವರಾಗಲು ಹಿಂಜರಿಯುತ್ತಿದ್ದಾರೆ ಎಂದರು.
ನನ್ನ ಮೇಲೆ ಭೂ ಒತ್ತುವರಿ ಆರೋಪವಿದೆ. ನಾನು ಕಾನೂನಿಗಿಂತ ದೊಡ್ಡವನಲ್ಲ. ನನ್ನ ಮೇಲೆ ಯಾವುದೇ ಆರೋಪವಿದ್ದರೂ ತನಿಖೆಗೆ ಸಿದ್ಧ ಎಂದು ಶ್ರೀರಾಮುಲು ಹೇಳಿದ್ರು.
ಸಿಬಿಐ ಕೇಂದ್ರ ಸರ್ಕಾರದ ದಾಳವಾಗಿದೆ ಎಂಬ ಡಿ.ಕೆ. ಶಿವಕುಮಾರ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಯುಪಿಎ ಅಧಿಕಾರದಲ್ಲಿದ್ದಾಗ ಎಷ್ಟು ಸಿಬಿಐ ದಾಳಿಗಳಾಗಿದೆ ಎಂದು ಪ್ರಶ್ನಿಸಿದ್ರು. ಡಿಕೆಶಿ ತಮ್ಮ ಮನೆ ಮೇಲೆ ದಾಳಿ ಆಗಿದ್ದಕ್ಕೆ ನೋವಿನಿಂದ ಹೀಗೆ ಮಾತಾಡುತ್ತಾರೆ ಎಂದು ಅವರು ವ್ಯಂಗ್ಯವಾಡಿದ್ರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv