ರಾಜ್ಯ ರಾಜಕಾರಣದತ್ತ ಶೋಭಾ ಚಿತ್ತ..!

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮತ್ತೆ ರಾಜ್ಯ ರಾಜಕಾರಣದತ್ತ ಮುಖ ಮಾಡುವ ಲಕ್ಷಣಗಳು ಕಾಣುತ್ತಿವೆ. 2008 ರಿಂದ 2013ರ ಅವಧಿಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ವಿಧಾನಸಭೆಗೆ ಶಾಸಕಿಯಾಗಿ ಆಯ್ಕೆಯಾಗಿದ್ದ ಶೋಭಾ ಕರಂದ್ಲಾಜೆ, ಬಿಜೆಪಿ ಆಡಳಿತಾವಧಿಯಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಅದ್ರೆ 2013ರಲ್ಲಿ ಬಿಜೆಪಿ ತೊರೆದು ಕೆಜೆಪಿ ಸೇರಿದ್ದ ಶೋಭಾ ಕರಂದ್ಲಾಜೆ, ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕೀಳಿದಿದ್ರು. ಅಂದು ಬಿಜೆಪಿಯ ಸುರೇಶ್ ಕುಮಾರ್ ವಿರುದ್ಧ ಪರಾಭವಗೊಮಡಿದ್ದ ಶೋಭಾ ಕರಂದ್ಲಾಜೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದ್ರೀಗ ಕೇಂದ್ರ ರಾಜಕಾರಣ ಬಿಟ್ಟು ಮತ್ತೆ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣದತ್ತ ಬರುವ ಲಕ್ಷಣಗಳು ಗೋಚರಿಸುತ್ತಿವೆ.

ಕೇಂದ್ರದಿಂದ ರಾಜ್ಯಕ್ಕೆ ಶೋಭಾ ಬರುತ್ತಿರುವುದು ಏಕೆ..?
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ 2019ರ ಲೋಕಸಭೆಗೆ ಸ್ಪರ್ಧೆ ಮಾಡುವುದು ಬೇಡ ಎಂದು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ 1st Newsಗೆ ಲಭ್ಯವಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 2019ರ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಬದಲಿಗೆ ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಅಥವಾ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾಗುವ ಸಾಧ್ಯತೆಯಿದ್ದು, ಶೋಭಾ ಕರಂದ್ಲಾಜೆ ಕೇಂದ್ರ ರಾಜಕಾರಣ ಬಿಟ್ಟು ರಾಜ್ಯ ರಾಜಕಾರಣಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಬಹು ಮುಖ್ಯವಾಗಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ರಾಜಕಾರಣ ಬಿಟ್ಟು, ರಾಜ್ಯದತ್ತ ಮುಖ ಮಾಡುತ್ತಿರುವುದು ಏಕೆ? ಎಂಬ ಪ್ರಶ್ನೆ ಎದುರಾಗಿದ್ದು, ಮೂಲಗಳ ಪ್ರಕಾರ ಶೋಭಾ ಕರಂದ್ಲಾಜೆ, ಯಡಿಯೂರಪ್ಪರ ಆಪ್ತೆಯಾಗಿ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ. ಜೊತೆಗೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಟ 22 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ತರಬೇಕಿದೆ. ಇತ್ತ ಯಡಿಯೂರಪ್ಪ, ಶ್ರೀರಾಮುಲು ರಾಜ್ಯ ಪ್ರವಾಸ ಆರಂಭ ಮಾಡಿ ಪಕ್ಷವನ್ನು ಸಂಘಟಿಸುತ್ತಾರೆ. ಅವರ ಜೊತೆಗೆ ಮಹಿಳೆಯಾಗಿ ರಾಜ್ಯ ಪ್ರವಾಸ ಮಾಡುವುದರ ಮೂಲಕ ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಶೋಭಾ ಕರಂದ್ಲಾಜೆ ಮಾಡಲಿದ್ದಾರೆ.

ರಾಜ್ಯಕ್ಕೆ ಬಂದ್ರೆ ಶೋಭಾ ಕರಂದ್ಲಾಜೆ ಸ್ಥಾನಮಾನವೇನು..?
ಇನ್ನು ರಾಜ್ಯ ರಾಜಕಾರಣಕ್ಕೆ ಬರಲಿರುವ ಶೋಭಾ ಕರಂದ್ಲಾಜೆಗೆ ಬಿಜೆಪಿಯಲ್ಲಿ ಯಾವ ಸ್ಥಾನಮಾನ ಸಿಗಲಿದೆ ಎಂಬ ಪ್ರಶ್ನೆ ಎದುರಾಗಿದೆ. ಹಾಲಿ ಸಂಸದೆಯಾಗಿರುವ ಶೋಭಾ ಕರಂದ್ಲಾಜೆಗೆ ಯಾವುದೇ ಹುದ್ದೆ ಇಲ್ಲದಂತೆ ಸುಮ್ಮನಿರಿಸಲು ಸಾಧ್ಯವಿಲ್ಲ. ಹೀಗಾಗಿ ವಿಧಾನಪರಿಷತ್ ಸದಸ್ಯರ ಸ್ಥಾನ ನೀಡುವ ಸಾಧ್ಯತೆಯಿದ್ದು, ಇದೇ ಅಕ್ಟೋಬರ್ ನಲ್ಲಿ 2 ಪರಿಷತ್ ನಾಮನಿರ್ದೇಶಿತ ಸದಸ್ಯರ ಅವಧಿ ಅಂತ್ಯವಾಗಲಿದೆ.
ಈ 2 ಸ್ಥಾನಗಳ ಪೈಕಿ ಒಂದನ್ನು ಶೋಭಾ ಕರಂದ್ಲಾಜೆಗೆ ನೀಡುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಶೋಭಾ ಅವರನ್ನು ರಾಜ್ಯದಲ್ಲಿ ಸಕ್ರಿಯ ಮಾಡಲು ಕೆಲ ನಾಯಕರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ವರದಿ :- ಪಿ. ಮಧುಸೂಧನ್

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv