‘ಶಿವಸೇನೆಯನ್ನ ಸೋಲಿಸುವವರು ಇನ್ನೂ ಹುಟ್ಟಿಲ್ಲ’

ಮಹಾರಾಷ್ಟ್ರ: ಶಿವಸೇನೆಯನ್ನು ಸೋಲಿಸುವಂತ ಯಾವೊಬ್ಬನು ಪ್ರಪಂಚದಲ್ಲೇ ಇನ್ನು ಜನ್ಮವೆತ್ತಿಲ್ಲ ಎಂದು ಶಿವಸೇನಾ ಅಧ್ಯಕ್ಷ ಉದ್ಧವ್​​ ಠಾಕ್ರೆ ಬಿಜೆಪಿ ಅಧ್ಯಕ್ಷ ಅಮಿತ್​​ ಶಾಗೆ ತಿರುಗೇಟು ನೀಡಿದ್ದಾರೆ. ಕಳೆದ ವಾರ ಹೇಳಿಕೆ ನೀಡಿದ್ದ ಅಮಿತ್​ ಶಾ, 2019ರ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಯಾರು ಮೈತ್ರಿ ಮಾಡಿಕೊಳ್ಳಲ್ಲವೋ ಆ ಪಕ್ಷಕ್ಕೆ ಸೋಲು ನಿಶ್ಚಯ ಎಂದಿದ್ದರು. ಈ ಬಗ್ಗೆ ಬಹಿರಂಗ ಸಮಾವೇಶದಲ್ಲಿ ಮಾಡನಾಡಿದ ಉದ್ಧವ್​​, ಶಿವಸೇನೆ ಜೊತೆ ಯಾರು ಸವಾಲು ಹಾಕ್ತಾರೋ ಅಂತವರೆಲ್ಲಾ ಈಗಾಗಲೇ ಫಲಿತಾಂಶ ಅರಿತಿದ್ದಾರೆ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನ ಪರೋಕ್ಷವಾಗಿ ಕುಟುಕಿದ ಠಾಕ್ರೆ, ಬಲಾಢ್ಯ ಸರ್ಕಾರಕ್ಕಿಂತಲೂ ಬಲಿಷ್ಠ ದೇಶ ಹೊಂದುವುದ ಅಗತ್ಯವಾಗಿದೆ ಎನ್ನುವ ಮೂಲಕ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಇತ್ತೀಚಿಗಷ್ಟೆ ಪ್ರಧಾನಿ ಮೋದಿ ಅನಿವಾರ್ಯತೆ ಸರ್ಕಾರಕ್ಕಿಂತ ಸದೃಢ ಸರ್ಕಾರ ಅಗತ್ಯ ಅಂತ ಹೇಳಿದ್ದರು.

ಇನ್ನು ರಾಮಮಂದಿರ ವಿವಾದ ಸುಪ್ರೀಂಕೋರ್ಟ್​​​ನಲ್ಲಿದೆ. ಹೀಗಿದ್ದೂ ಕೇಂದ್ರ ಸರ್ಕಾರವೇಕೆ ಮತಬೇಟೆಗೆ ಅದನ್ನು ಬಳಸಿಕೊಳ್ಳುತ್ತಿದೆ ಎಂದು ಠಾಕ್ರೆ ಹರಿಹಾಯ್ದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ರಾಮಮಂದಿರ ವಿವಾದ ಮುನ್ನೆಲೆಗೆ ತಂದಿದೆ. ಕಾಂಗ್ರೆಸ್​​​ ಸಹ ರಾಮ ಮಂದಿರ ವಿವಾದದಲ್ಲಿ ಮೂಲೆಗುಂಪಾಗಿದೆ. ಇನ್ನು ಇದೇ ವಿವಾದಕ್ಕೆ ಸಂಬಂಧಿಸಿ ಬಿಜೆಪಿ ಕಾಂಗ್ರೆಸ್​​ಗೆ ಏಕೆ ಟೀಕಿಸುತ್ತೆ ಎಂದು ಪ್ರಶ್ನಿಸಿದ್ದಾರೆ. ಸ್ವತಃ ಬಿಜೆಪಿಯ ಮಿತ್ರರೇ ಆದ ನಿತೀಶ್​​ ಕುಮಾರ್​​ ಹಾಗೂ ರಾಮ್​​ ವಿಲಾಸ್​​ ಪಾಸ್ವಾನ್​​ ಕೂಡ ರಾಮ ಮಂದಿರ ನಿರ್ಮಾಣಕ್ಕೆ ವಿರೋಧಿಸುತ್ತಿದ್ದಾರೆ. ಆದ್ರೂ ಬಿಜೆಪಿ ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಮಾಡ್ತಿದೆ ಅಂತ ಆರೋಪಿಸಿದ್ರು.