ವಿಶ್ವ ಪರಿಸರ ದಿನ: ನಗರದಲ್ಲಿ ಸಂರಕ್ಷಣಾ ಜಾಥಾ

ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ. 5 ರಂದು ನಗರದಲ್ಲಿ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಆಗ್ರಹಿಸಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿಯ ಪ್ರಮುಖ ಕೆ.ವಿ. ವಸಂತ್ ಕುಮಾರ್ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ ಇರುವ ಕೆರೆಗಳನ್ನು ಸಂರಕ್ಷಿಸುವುದರ ಜತೆಗೆ ಅವುಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಜಾಥಾ ಹಮಿಕೊಳ್ಳಲಾಗಿದೆ. ಜೂನ್​ 5ರಂದು ನಗರದ ಶಿವಪ್ಪ ನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಲಾಗುವುದು ಅಂತಾ ತಿಳಿಸಿದ್ರು.

ಈ ವೇಳೆ, ನವುಲೆ ಕೆರೆ, ಪುರಲೆ ಕೆರೆ, ಚೆನ್ನಾಂಬಪುರ ಕೆರೆ ಸೇರಿದಂತೆ ಸುತ್ತಮುತ್ತಲಿನ ಕೆರೆಗಳ ಸರ್ವೇ ಕಾರ್ಯ ನಡೆಸಿ ಗಡಿ ಗುರುತಿಸಬೇಕು. ಒತ್ತುವರಿ ತೆರವುಗೊಳಿಸಬೇಕು. ನವುಲೆ ಕೆರೆ ಹೂಳನ್ನು ತೆಗೆದು ಸ್ವಚ್ಛಗೊಳಿಸಬೇಕು, ಕೆರೆಯ ತೂಬನ್ನು ಮುಚ್ಚಿಸಿ ನೀರು ನಿಲ್ಲಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇನ್ನು, ನಗರ ಪ್ರದೇಶದಲ್ಲಿರುವ ಎಲ್ಲ ಕೆರೆಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ, ದಂಡೆ ಹಾಗೂ ವಾಕಿಂಗ್ ಪಾತ್ ನಿರ್ಮಿಸಿ ಸುತ್ತಲೂ ಗಿಡ ಬೆಳೆಸಬೇಕು, ವಿಶ್ರಾಂತಿಗಾಗಿ ಆಸನಗಳ ವ್ಯವಸ್ಥೆ ಕಲ್ಪಿಸಬೇಕು, ಅಲ್ಲದೇ ಕೆರೆ ಒತ್ತುವರಿ ಮಾಡಿದವರ ವಿರುದ್ಧ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಯಮದಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದರು.

ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ರೋಟರಿ ಕ್ಲಬ್‌ಗಳು, ಜೆ.ಸಿ. ಸಂಸ್ಥೆಗಳು, ಅಣ್ಣಾ ಹಜಾರೆ ಹೋರಾಟ ಸಮಿತಿ, ನಾಗರಕ ಹಿತರಕ್ಷಣಾ ವೇದಿಕೆ, ಉತ್ತಿಷ್ಠ ಭಾರತ, ಪರೋಪಕಾರಂ, ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ನಗರದ ಪರಿಸರ ಆಸಕ್ತರು, ನಾಗರಿಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿವಮೊಗ್ಗದ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಇನ್ನು, ಗೋಷ್ಠಿಯಲ್ಲಿ ಎಸ್.ಬಿ. ಅಶೋಕ್ ಕುಮಾರ್, ಜನಾರ್ದನ ಪೈ, ಪರಿಸರ ನಾಗರಾಜ್, ಬಾಲಸುಬ್ರಮಣ್ಯ, ಚಂದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv