‘ದಂತ’ಕತೆ ಬಗ್ಗೆ ಕೊನೆಗೂ ದಾಖಲಾಯ್ತು ಕೇಸ್‌..!

ಶಿವಮೊಗ್ಗ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಇಲ್ಲಿನ ಎಸ್‌ಪಿ ಕಚೇರಿಯಲ್ಲಿನ ಜೋಡಿ ಆನೆ ದಂತ ನಾಪತ್ತೆ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಕೊನೆಗೂ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದೆ. ಮೂರ್ನಾಲ್ಕು ತಿಂಗಳಿನಿಂದ ಕೈಗೊಂಡ ಆಂತರಿಕ ತನಿಖೆಯಿಂದ ಯಾವುದೇ ಪ್ರಯೋಜನವಾಗದ ಕಾರಣ ಬೇರೆ ವಿಧಿಯಿಲ್ಲದೆ ಅಧಿಕೃತವಾಗಿ ಪ್ರಕರಣ ದಾಖಲಿಸಲಾಗಿದೆ.
ಜೋಡಿ ದಂತ ನಾಪತ್ತೆ ಕುರಿತು ಎಸ್‌ಪಿ ಕಚೇರಿಯ ರಹಸ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಟೆನೋಗ್ರಾಫರ್ ಎ. ಬಿ. ಶ್ರೀನಾಥ್ ಎಂಬುವವರು ದೂರು ನೀಡಿದ್ದಾರೆ. ಅದರಂತೆ ಐಪಿಸಿ ಕಲಂ 1860(ಯು/ಎಸ್; 381) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಜೋಡಿ ದಂತಗಳು 2015 ರಲ್ಲಿ ನಾಪತ್ತೆಯಾಗಿರಬಹುದು ಎನ್ನಲಾಗಿದ್ದು, ಕಳೆದ ವರ್ಷ ಅಂದರೆ 2017 ರ  ಜೂ. 28 ರಂದು ನಾಪತ್ತೆಯಾಗಿರುವುದು ಬಹಿರಂಗವಾಗಿತ್ತು. ಆದರೆ, ಪೊಲೀಸ್ ಇಲಾಖೆಗೆ ಜೂನ್ 28 ಕ್ಕೆ ಒಂದು ತಿಂಗಳ ಮೊದಲೇ ಗೊತ್ತಾಗಿದ್ದು,  ಈ ಸಂಬಂಧ ಮಾಹಿತಿ ಸಂಗ್ರಹಿಸುವಷ್ಟರಲ್ಲಿ ಮಾಧ್ಯಮಗಳಲ್ಲಿ ವಿಷಯ ಪ್ರಕಟಗೊಂಡಿದ್ದರಿಂದ ಇಲಾಖೆ ಅಧಿಕೃತವಾಗಿ ನಾಪತ್ತೆಯಾಗಿರುವುದನ್ನು ಒಪ್ಪಿಕೊಂಡು ಇಲಾಖಾ ವಿಚಾರಣೆ ಆರಂಭಿಸಿತ್ತು.
ಅಡಿಷನಲ್ ಎಸ್ಪಿ ನೇತೃತ್ವದಲ್ಲಿ ನಡದ ತನಿಖೆಯಲ್ಲಿ ಯಾವುದೇ ಫಲಿತಾಂಶ ಸಿಗಲಿಲ್ಲ. ಹಾಗಾಗಿ ಅಂತಿಮವಾಗಿ ಹತ್ತು  ದಿನದ ಹಿಂದೆ ಅಂದರೆ ಮೇ 22 ರಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ದಂತ ಕಳವು ಪ್ರಕರಣದ ಕುರಿತು ಅಧಿಕೃತವಾಗಿ ದೂರು ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ.

ದೂರಿನ ಸಾರಾಂಶ
ಶ್ರೀನಾಥ್ ಅವರು  ನೀಡಿರುವ ದೂರಿನಲ್ಲಿ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.  ತಾವು 2015 ರ ಮೇ 11 ರಂದು ಚಿಕ್ಕಮಗಳೂರಿನಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದು, ಅಂದಿನಿಂದಲೂ ರಹಸ್ಯ ಶಾಖೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕೆಲ ತಿಂಗಳ ಹಿಂದೆ ಎಸ್ಪಿ ನನ್ನನ್ನು ಕರೆದು ತಮ್ಮ ಕಚೇರಿಯಲ್ಲಿ ಇದ್ದ ಎರಡು ಆನೆ ದಂತ ಇಲ್ಲದೆ ಇರುವ ಕುರಿತು ವಿಚಾರಣೆ ಮಾಡಿದರು. ಈ ಆನೆ ದಂತ ಇರುವ ಕುರಿತು ಇಲಾಖೆಯ ದಾಖಲೆಗಳಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದೆ. ನಾನು ವರ್ಗಾವಣೆಯಾದ ಸಂದರ್ಭದಲ್ಲಿ ಎಸ್‌ಪಿ ಕಚೇರಿಯ ರಹಸ್ಯ ಇಲಾಖೆಯಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಸಶಸ್ತ್ರ ಪೊಲೀಸ್ ವಿಭಾಗದ ವಿನೋದ್ ಕುಮಾರ್ ಎಂ. ಸೂರ್ಯವಂಶಿ ಮತ್ತು ಮಂಜುನಾಥ್ ಅವರಲ್ಲಿ ವಿಚಾರಿಸಿದಾಗ ತಮಗೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು. ಆದರೆ ಈ ದಂತಗಳಂತಹ ವಸ್ತುಗಳು ಇದ್ದವು ಎಂಬುದರ ಕುರಿತು ಮಾಹಿತಿ ನೀಡಿದರು ಎಂದು ದೂರಿನಲ್ಲಿ ವಿವರವಾಗಿ ತಿಳಿಸಿದ್ದಾರೆ.
ಅತ್ಯಂತ ಮೌಲ್ಯಯುತವಾದ ಈ ದಂತಗಳ ಬಗ್ಗೆ ಎಲ್ಲ ರೀತಿಯ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಅಂತಿಮವಾಗಿ ಎಸ್ಪಿ ಸೂಚನೆ ಮೇರೆಗೆ ಅಪರ  ಎಸ್ಪಿಯವರು ಆನೆ ದಂತ ಕಾಣೆಯಾದ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಿದರು. ವಿಚಾರಣೆ ಸಂದರ್ಭದಲ್ಲಿ ಈ ಆನೆ ದಂತ ನಾಪತ್ತೆ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ಈ ಬಗ್ಗೆ ಇನ್ನಷ್ಟು ವಿವರವಾದ ತನಿಖೆ ಅವಶ್ಯಕವಾಗಿದ್ದು, ಇದನ್ನು ಪತ್ತೆ ಮಾಡಿಕೊಡುವಂತೆ ದೂರಿನಲ್ಲಿ ಕೋರಿದ್ದಾರೆ. ದೂರಿಗೆ ಪೂರಕವಾಗಿ ಜೋಡಿ ಆನೆ ದಂತ ಎಸ್‌ಪಿ ಕಚೇರಿಯಲ್ಲಿ ಇದ್ದ ಛಾಯಾಚಿತ್ರವನ್ನು ಲಗತ್ತಿಸಿದ್ದಾರೆ. ಕೋಟ್ಯಂತರ ರೂ. ಬೆಲೆ ಬಾಳುವ ಈ ಜೋಡಿ ಆನೆ ದಂತವನ್ನು ಎಸ್ಪಿ ಕಚೇರಿಯಲ್ಲಿ ಇಡಲಾಗಿದ್ದರೂ, ಇದನ್ನು ಇಲಾಖೆಯ ಸ್ವತ್ತು ಎಂದು ಪರಿಗಣಿಸಿ ದಾಖಲೆಗಳಲ್ಲಿ ಸೇರಿಸುವ ಕ್ರಮಕ್ಕೆ ಯಾವ ಅಧಿಕಾರಿಯೂ ಮುಂದಾಗಿರಲಿಲ್ಲ. ಹಾಗಾಗಿ ದಂತ ಇದ್ದ ಬಗ್ಗೆ  ದಾಖಲೆಗಳಲ್ಲಿ ಯಾವುದೇ ಮಾಹಿತಿ ಇಲ್ಲ. ಆದರೆ ಅನೇಕ ಛಾಯಾಚಿತ್ರಗಳಲ್ಲಿ ಇದು ಅಲ್ಲಿರುವುದು ದಾಖಲಾಗಿದೆ. ಇಲಾಖೆಯ ಮಾಹಿತಿ ಪುಸ್ತಕದಲ್ಲಿ ದಂತದ ವಿವರ ನಮೂದಿಸದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ಆಕ್ಷೇಪ ಎತ್ತಿದ್ದಾರೆ ಎನ್ನಲಾಗಿದ್ದು, ಆದರೆ ಇದರ ಜವಾಬ್ದಾರಿಯನ್ನು ಯಾರೂ ಹೊರುತ್ತಿಲ್ಲ. ಅಪಾರ ಬೆಲೆ ಬಾಳುವ ಜೋಡಿ ದಂತದ ಬಗ್ಗೆ ದಾಖಲೆ ಇಲ್ಲದಿರುವುದರ ಮಾಹಿತಿ ಇದ್ದವರೇ ದಂತವನ್ನು ಹೊತ್ತೊಯ್ದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ದಂತಗಳು ನಾಪತ್ತೆಯಾಗಿರೋದು ಗೋತ್ತಾಗಿದ್ದು ಹೇಗೆ..?

ಶಿವಮೊಗ್ಗ ಎಸ್‌ಪಿ ಕಚೇರಿಯಲ್ಲಿ ಅನೇಕ ಐತಿಹಾಸಿಕ ಕಲ್ಲಿನ ಶಿಲ್ಪಗಳು ಇದ್ದವು. ಕಳೆದ ವರ್ಷ ಇದನ್ನು ಕುವೆಂಪು ವಿವಿಯಲ್ಲಿ ಹೊಸದಾಗಿ ಸ್ಥಾಪಿಸಿದ ಆರ್ಕಿಯಾಲಜಿ ವಿಭಾಗಕಕ್ಕೆ ಸ್ಥಳಾಂತರಿಸುವ ಸಂಬಂಧ ವಸ್ತುಗಳ ಪಟ್ಟಿ ತಯಾರಿಸಲಾಗುತ್ತಿತ್ತು. ಆ ವೇಳೆಯಲ್ಲಿ ಅಲ್ಲಿದ್ದ ಸಿಬಂದಿಯೊಬ್ಬರು ಎಸ್‌ಪಿ ಕಚೇರಿಯಲ್ಲಿನ ಜೋಡಿ ಆನೆ ದಂತದ ಬಗ್ಗೆ ಪ್ರಸ್ತಾಪಿಸಿದರು. ಆಗ ಅದರ ಬಗ್ಗೆ ಗಮನ ಹರಿಸಿದ ಎಸ್‌ಪಿಯವರು ತಮ್ಮ ಕಚೇರಿಯಲ್ಲಿ ಅದು ಇಲ್ಲದೆ ಇರುವುದನ್ನು ಗಮನಿಸಿದರು. ಹೀಗೆ ಜೋಡಿ ಆನೆ ದಂತ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಎಡಿಜಿಪಿ ಕಮಲ್ ಪಂತ್ ಶಿವಮೊಗ್ಗಕ್ಕೆ ಭೇಟಿ ನೀಡಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೆರಳಿದ್ದರು. ತಾವು ಶಿವಮೊಗ್ಗದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುವಾಗ ದಂತ ಇದ್ದ ಬಗ್ಗೆ ತಿಳಿಸಿದ್ದರು.

ಇನ್ಸ್‌ಪೆಕ್ಟರ್‌ ಮಂಜುನಾಥ್‌ ಹೆಗಲಿಗೆ ಪ್ರಕರಣ

ಜೋಡಿ ದಂತ ನಾಪತ್ತೆ ಪ್ರಕರಣದ ತನಿಖೆ ಹೊಣೆಯನ್ನು ಹೊಸನಗರ ಠಾಣೆ ಇನ್ಸ್‌ಪೆಕ್ಟರ್‌ ಮಂಜುನಾಥ್ ಅವರಿಗೆ ವಹಿಸಲಾಗಿದೆ. ಈ ಹಿಂದೆ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಕವಿಮನೆಯಿಂದ ಕಳುವಾಗಿದ್ದ ಪದ್ಮ ವಿಭೂಷಣ ಪ್ರಶಸ್ತಿಯ ಪದಕವನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಕರಣವನ್ನು ಬೇಧಿಸಿದ್ದರು. ಹಾಗಾಗಿ ಜೋಡಿ ಆನೆ ದಂತ ಪ್ರಕರಣವನ್ನೂ ಮಂಜುನಾಥ್ ಗೆ ವಹಿಸಲಾಗಿದ್ದು ಆರೋಪಿಗಳು ಪತ್ತೆಯಾಗುತ್ತಾರೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕು.

ವರದಿ-ವಿ.ಸಿ ಪ್ರಸನ್ನ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv