ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪಗೆ ಸಾಥ್​​​ ನೀಡಿದ ಕಿಮ್ಮನೆ ರತ್ನಾಕರ್​..!

ಶಿವಮೊಗ್ಗ: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ. ಯಾರೂ ಶಾಶ್ವತ ಶತ್ರುವೂ ಅಲ್ಲ. ಅದು ಕಾಲ ಕಾಲಕ್ಕೆ ಸಂದರ್ಭಕ್ಕನುಗುಣವಾಗಿ ಬದಲಾಗುವಂತಹುದು ಎಂಬುದು ಎಲ್ಲೆಡೆ ಕೇಳಿ ಬರುವ ಮಾತು. ಇದಕ್ಕೆ ಪುಷ್ಟಿ ನೀಡುವಂತೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲೀಗ ಒಂದು ಕಾಲದ ಶತ್ರುಗಳಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಹಾಗೂ ಜೆಡಿಎಸ್​ ಜಿಲ್ಲಾಧ್ಯಕ್ಷರಾದ ಆರ್​.ಎಂ.ಮಂಜುನಾಥ ಗೌಡರು ಜೋಡೆತ್ತಿನ ರೀತಿಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು. ಹೌದು. ಆಶ್ಚರ್ಯವಾದರೂ ನಂಬಲೇಬೇಕಾದ ಈ ವಿಷಯಕ್ಕೆ ಇಂಬು ನೀಡುವಂತೆ ಈ ಇಬ್ಬರೂ ಮುಖಂಡರು ತಮ್ಮ ನಡುವಿನ ವೈಮನಸ್ಸನ್ನು ಸದ್ಯಕ್ಕೆ ಬದಿಗಿಟ್ಟು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಟೊಂಕ ಕಟ್ಟಿ ನಿಂತಿರುವುದು ಕಂಡು ಬರುತ್ತಿದೆ.

ಲೋಕಸಭೆ ಚುನಾವಣೆ ಘೋಷಣೆಯಾದ ಹಾಗೂ ಮಧು ಬಂಗಾರಪ್ಪ ಈ ಬಾರಿಯೂ ಮೈತ್ರಿ ಪಕ್ಷದ ಅಭ್ಯರ್ಥಿ ಎಂಬುದು ದೃಢಪಟ್ಟ ಬೆನ್ನಲ್ಲೇ ಮಂಜುನಾಥ ಗೌಡ ಅವರೊಂದಿಗೆ ಯಾವುದೇ ಕಾರಣಕ್ಕೂ ವೇದಿಕೆ ಹಂಚಿಕೊಳ್ಳುವುದಿಲ್ಲ. ನನ್ನ ಬಗ್ಗೆ ಅಪಪ್ರಚಾರ ಮಾಡಿದವರೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಆದರೆ ಮೈತ್ರಿ ಅಭ್ಯರ್ಥಿ ಪರ ಮತ ಯಾಚನೆಗೆ ಹಿಂದೆ ಸರಿಯುವುದಿಲ್ಲ ಎಂದು ಕಿಮ್ಮನೆ ರತ್ನಾಕರ್​ ಬಹಿರಂಗವಾಗಿ ಸಾರಿದ್ದರು. ಇದು ಸ್ವಲ್ಪಮಟ್ಟಿಗೆ ತೀರ್ಥಹಳ್ಳಿ ವಿಧಾನ ಸಭೆ ಕ್ಷೇತ್ರದ ಜೆಡಿಎಸ್​ ಮತ್ತು ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಈ ಹಿಂದಿನ ಉಪ ಚುನಾವಣೆ ವೇಳೆ ಆದಂತೆ ಮತ ಗಳಿಕೆ ಮೇಲೆ ಪರಿಣಾಮ ಬೀರುತ್ತದೆ. ಮೈತ್ರಿ ಅಭ್ಯರ್ಥಿಗೆ ಇಲ್ಲಿ ಕಡಿಮೆ ಮತ ಬೀಳುತ್ತದೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಇದನ್ನು ಮುಂಚಿತವಾಗಿಯೇ ಗ್ರಹಿಸಿದ್ದ ಮಧು ಬಂಗಾರಪ್ಪ ಜಿಲ್ಲಾಮಟ್ಟದಲ್ಲಿ ಎರಡೂ ಪಕ್ಷದ ಪ್ರಮುಖ ಮುಖಂಡರಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸಚಿವ ಡಿ.ಕೆ.ಶಿವಕುಮಾರ್​ ಖುದ್ದು ಶಿವಮೊಗ್ಗಕ್ಕೆ ಆಗಮಿಸಿ ಬಗೆ ಹರಿಸುತ್ತಾರೆ ಎಂದು ಹೇಳಿದ್ದರು. ಅದೇ ಪ್ರಕಾರ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ ಮತ್ತು ತೀರ್ಥಹಳ್ಳಿಗೆ ಭೇಟಿ ನೀಡಿ ಪ್ರಚಾರ ಸಭೆ ನಡೆಸಿದ ಶಿವಕುಮಾರ್​ ಇದೇ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ್​ ಹಾಗೂ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್​ ಅವರಿಗೂ ಖಡಕ್​ ಸೂಚನೆ ನೀಡಿ ಯಾವುದೇ ಕಾರಣಕ್ಕೂ ನಿಮ್ಮಗಳ ನಡುವೆ ಜಿಲ್ಲಾಮಟ್ಟದಲ್ಲಿರುವ ಭಿನ್ನಾಭಿಪ್ರಾಯ ಚುನಾವಣೆ ಮೇಲೆ ಪರಿಣಾಮ ಬೀರಬಾರದು. ಎರಡೂ ಕಡೆ ಕಳೆದ ಬಾರಿಗಿಂತ ಈ ಸಲ ಹೆಚ್ಚಿನ ಮತ ಲಭಿಸಬೇಕು. ಇಲ್ಲವಾದರೆ ಸರಿಯಿರುವುದಿಲ್ಲ ಎಂದು ಎಚ್ಚರಿಕೆಯ ಮಾತುಗಳಾಡಿದ್ದರು. ಅಲ್ಲದೆ ತೀರ್ಥಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಇಬ್ಬರೂ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುವ ಹಾಗೆ ಮಾಡಿದ್ದರು. ಇದರ ಪರಿಣಾಮ ಎಂಬಂತೆ ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಕಿಮ್ಮನೆ ರತ್ನಾಕರ್​ ಹಾಗೂ ಆರ್​.ಎಂ.ಮಂಜುನಾಥ ಗೌಡ  ತಮ್ಮ ನಡುವಿನ ವೈರತ್ವವನ್ನು ಬದಿಗಿಟ್ಟು ಅಭ್ಯರ್ಥಿ ಮಧು ಬಂಗಾರಪ್ಪ ಪರ ಕ್ಷೇತ್ರಾದ್ಯಂತ ಬಿರುಸಿನ ಪ್ರವಾಸ ನಡೆಸುವ ಮೂಲಕ ಮತ ಯಾಚಿಸುತ್ತಿರುವುದು ಕಂಡು ಬರುತ್ತಿದೆ.

ಒಕ್ಕಲಿಗ ಸಮಾಜದ ಪ್ರಮುಖ ನಾಯಕರಾಗಿರುವ ಈ ಇಬ್ಬರೂ ವಿರುದ್ಧ ದಿಕ್ಕಿನಲ್ಲಿದ್ದ ಕಾರಣ ಸಮಾಜದ ಮತದಾರರಿಗೆ ರಾಜಕೀಯವಾಗಿ ನಿರ್ಧಾರ ಕೈಗೊಳ್ಳುವುದು ಕಷ್ಟವಾಗುತ್ತಿತ್ತು. ಒಬ್ಬರಿಗೆ ಮತ ಹಾಕಿದರೆ ಮತ್ತೊಬ್ಬರಿಗೆ ಕಷ್ಟ ಎಂಬಂತ ಪರಿಸ್ಥಿತಿ ಇತ್ತು. ಆದರೆ ಈ ಬಾರಿ ಮೈತ್ರಿ ಅಭ್ಯರ್ಥಿ ಪರವಾಗಿ ಈ ಇಬ್ಬರೂ ಮತ ಯಾಚಿಸುತ್ತಿರುವ ಕಾರಣ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗಳು ಹೆಚ್ಚಿನ ಪ್ರಮಾಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗೆ ಒಲಿಯಲಿವೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಈ ಇಬ್ಬರೂ ಕ್ಷೇತ್ರದ ಬೂತ್​ ಮಟ್ಟದಲ್ಲಿ ಒಟ್ಟಿಗೆ ಪ್ರಚಾರ ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬುತ್ತಿದ್ದಾರೆ. ಇನ್ನು ಸರಿ ಸುಮಾರು ಒಂದು ದಶಕ ಜೆಡಿಎಸ್​ನಲ್ಲಿದ್ದು ಇತ್ತೀಚೆಗಷ್ಟೇ ಮಂಜುನಾಥ್​ ಗೌಡರ ಮೇಲಿನ ಮುನಿಸಿನಿಂದ ಜೆಡಿಎಸ್​ ತೊರೆದು ಬಿಜೆಪಿ ಸೇರಿರುವ ಒಕ್ಕಲಿಗ ಸಮಾಜದ ಮದನ್​ ಅವರಿಂದ ಆಗಬಹುದಾದ ವ್ಯತಿರಿಕ್ತ ಪರಿಣಾಮವನ್ನು ಎದುರಿಸಲು ಈ ಇಬ್ಬರೂ ನಿರ್ಧರಿಸಿದ್ದು ಅದಕ್ಕೆ ಸೂಕ್ತ ತಂತ್ರಗಾರಿಕೆ ನಡೆಸಿದ್ದಾರೆ.

ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ ಅವರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಮತ ವಿಭಜನೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ತೀರ್ಥಹಳ್ಳಿ ಕ್ಷೇತ್ರವನ್ನು ಈಗಾಗಲೇ ತೆಕ್ಕೆಗೆ ತೆಗೆದುಕೊಂಡಿರುವ ಬಿಜೆಪಿಯನ್ನು ಮಣಿಸಲು ಹಾಗೂ ಒಕ್ಕಲಿಗ ಸಮಾಜದ ಮತಗಳು ವಿಭಜನೆಗೊಳ್ಳುವುದನ್ನು ತಡೆಯಲು ಈ ಇಬ್ಬರೂ ನಿರ್ಧರಿಸಿದ್ದು ಇದಕ್ಕಾಗಿ ಸರಣಿ ಸಭೆಯ ಜೊತೆಗೆ ಮತದಾರರ ಭೇಟಿಯನ್ನು ಚುರುಕುಗೊಳಿಸಿದ್ದಾರೆ. ಈಡಿಗ ಹಾಗೂ ಒಕ್ಕಲಿಗ ಸಮಾಜಗಳು ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಈ ಸಲ ಮೈತ್ರಿ ಅಭ್ಯರ್ಥಿಗೆ ಅತಿ ಹೆಚ್ಚಿನ ದೊರಕಿಸಿಕೊಡುವುದು ಈ ಇಬ್ಬರಿಗೂ ಒಂದು ರೀತಿಯಲ್ಲಿ ಸವಾಲಾಗಿದ್ದು ಅದನ್ನು ಯಶಸ್ವಿಯಾಗಿ ಎದುರಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಇವರೀರ್ವರಿಗೂ ಅನಿವಾರ್ಯವಾಗಿದೆ.

ಒಟ್ಟಿನಲ್ಲಿ ಕೆಲವೇ ತಿಂಗಳ ಹಿಂದೆ ಒಬ್ಬರ ಮುಖವನ್ನೊಬ್ಬರು ನೋಡದ ಪರಿಸ್ಥಿತಿ ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಇದೀಗ ಲೋಕಸಭೆ ಚುನಾವಣೆ ಮೂಲಕ ಈ ಇಬ್ಬರೂ ಜೋಡೆತ್ತಿನ ರೀತಿ ಜಂಟಿ ಪ್ರಚಾರದಲ್ಲಿ ತೊಡಗಿರುವುದರಿಂದ ಕಾರ್ಯಕರ್ತರ ಉತ್ಸಾಹ ನೂರ್ಮಡಿಗೊಂಡಿರುವುದಂತೂ ಸತ್ಯ.

ವಿಶೇಷ ವರದಿ: ವಿ.ಸಿ.ಪ್ರಸನ್ನ, ಶಿವಮೊಗ್ಗ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv