ಕಚೇರಿಯ ಗೇಟ್​ಗೆ ಶಾರ್ಕ್​​ ರುಂಡ, ದಂಗಾದ್ರು ಸಿಬ್ಬಂದಿ..!

ಸಿಡ್ನಿ: ಆಸ್ಟ್ರೇಲಿಯಾದ ಸಮುದ್ರ ರಕ್ಷಣಾ ಸಂಸ್ಥೆ ಕಚೇರಿಯ ಗೇಟ್​​ಗೆ ದುಷ್ಕರ್ಮಿಗಳು ಶಾರ್ಕ್​​​ನ ರುಂಡವನ್ನು ಸಿಕ್ಕಿಸಿರೋ ಶಾಕಿಂಗ್​ ಘಟನೆಯೊಂದು ವರದಿಯಾಗಿದೆ. ಶಾರ್ಕ್​​ನ ಬಾಯಿಗೆ ಸಿಗರೇಟ್​​ ತುಂಡುಗಳು ಹಾಗೂ ಸಮುದ್ರದ ಕಸವನ್ನು ತುಂಬಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.

ಶನಿವಾರ ಬೆಳಗ್ಗೆ ಸಮುದ್ರ ರಕ್ಷಣಾ ಕಾರ್ಯಕರ್ತರು ಕಚೇರಿಗೆ ಆಗಮಿಸಿದಾಗ ಶಾರ್ಕ್​ನ ರುಂಡ ಪತ್ತೆಯಾಗಿದೆ. ಈ ಬಗ್ಗೆ ರೀಜನಲ್ ಆಪರೇಷನ್ಸ್​ ಮ್ಯಾನೇಜರ್​ ಬ್ರೂಸ್​​ ಮಿಚೆಲ್ ಪ್ರತಿಕ್ರಿಯೆ ನೀಡಿದ್ದು,  ಈ ರೀತಿಯ ಘಟನೆ ಬಗ್ಗೆ ಕೇಳಿರುವುದು ಇದೇ ಮೊದಲ ಸಲ. ಶಾರ್ಕ್​​ ಇನ್ನೂ ಫ್ರೆಶ್​ ಆಗಿ ಕಾಣುತ್ತಿದ್ದು, ಶನಿವಾರದಂದು ಹಿಡಿದಿರುವಂತೆ ಕಾಣುತ್ತದೆ. ಶಾರ್ಕ್​​ ಹಿಡಿದವರು ಅದನ್ನು ಬೋಟ್​​ನಲ್ಲಿ ತಂದು ಕ್ಲೀನ್​ ಮಾಡಿ, ತಲೆಯನ್ನ ಕತ್ತರಿಸಿದ್ದಾರೆ. ಇಡೀ ಶಾರ್ಕ್​​ ಸುಮಾರು 70 ಕೆ.ಜಿ ತೂಕವಿದ್ದಿರಬಹುದು. ಯಾರಾದ್ರೂ ರಾತ್ರಿ ವೇಳೆ ಕಚೇರಿಯ ಬಳಿ ಬಂದಿರಬಹುದು. ಹುಡುಗಾಟಕ್ಕಾಗಿ ಈ ರೀತಿ ಮಾಡಿರುವ ಸಾಧ್ಯತೆ ಇದೆ ಎಂದು ​ಹೇಳಿದ್ದಾರೆ.

ಬೋಟರ್​ಗಳಿಗೆ ತುರ್ತು ಸಂದರ್ಭದಲ್ಲಿ ಅಥವಾ ಇತರೆ ಸಮಯದಲ್ಲಿ ಸಹಾಯ ಮಾಡೋ ಸಂಸ್ಥೆಯ ಕಾರ್ಯಕರ್ತರಿಗೆ ಯಾವುದೇ ಬೆದರಿಕೆ ಬಂದಿರಲಿಲ್ಲ. ಹೀಗಾಗಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ ಎಂದು ಮಿಚೆಲ್​ ತಿಳಿಸಿದ್ದಾರೆ.

ಗೇಟ್​​ ಮೇಲೆ ಶಾರ್ಕ್​​​ ತಲೆ ಇಟ್ಟಿರುವ ಫೋಟೋಗಳನ್ನ ಸಂಸ್ಥೆ ಫೇಸ್​​ಬುಕ್​ನಲ್ಲಿ ಹಂಚಿಕೊಂಡಿದೆ. ನಮ್ಮ ಸಮಯವನ್ನ ಮೀಸಲಿಟ್ಟು ಸಮುದ್ರದಲ್ಲಿ ಜನರ ರಕ್ಷಣೆ ಮಾಡುವ ನಮ್ಮ ಕಾರ್ಯಕರ್ತರ ಧೈರ್ಯವನ್ನು ಪ್ರಶ್ನಿಸುವಂತಿದೆ ಈ ಕೃತ್ಯ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಬರಹ: ಪ್ರಕೃತಿ ಸಿಂಹ

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv