ಶ್ರೀಗಳ ಸಮ್ಮುಖದಲ್ಲಿ ಇತ್ಯರ್ಥಗೊಂಡ 4 ವರ್ಷಗಳ ಕಲಹ

ಚಿತ್ರದುರ್ಗ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕುಳೇನೂರು ಗ್ರಾಮದ ಕುಂಚಿಟಿಗ ಜನಾಂಗದ ಈಶಣ್ಣ ಹಾಗೂ ಉಪ್ಪರ ಸಮುದಾಯದ ಬಜ್ಜಿ ಬಸಪ್ಪ ಕುಟುಂಬಗಳ ಮಧ್ಯೆ ಕಳೆದ 4 ವರ್ಷಗಳಿಂದ ಕಲಹ ಉಂಟಾಗಿ ಕೋರ್ಟು, ಕಚೇರಿಗೆ ಅಲೆಯುತ್ತಿದ್ದರು. ಇದನ್ನ ಮನಗಂಡ ಜಿಲ್ಲೆಯ ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನದ ಶ್ರೀಗಳು ಪ್ರಕರಣವನ್ನು ರಾಜಿ ಮಾಡಿಸಿದ್ದಾರೆ.

ನಿನ್ನೆ ದಲಿತ ಹಿಂದುಳಿದ ಮಠಾದೀಶರ ಒಕ್ಕೂಟ ವತಿಯಿಂದ ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ರಾಜಿ ಸಂಧಾನ ನಡೆಯಿತು. ರಾಜಿ ಸಂಧಾನ ಸಭೆಯಲ್ಲಿ ಡಾ.ಶ್ರೀ ಶಾಂತವೀರ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಈ ವೇಳೆ ಮಾತನಾಡಿದ ಶ್ರೀಗಳು, ಗ್ರಾಮದಲ್ಲಿ ಪ್ರತಿನಿತ್ಯ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಲೇಬೇಕಾದ ಪರಿಸ್ಥಿತಿ ಇದೆ. ಹೀಗಿರುವ ಕಾರಣ ಗ್ರಾಮಗಳಲ್ಲಿ ಸಹೋದರರಂತೆ ಸೌಹಾರ್ದತೆಯಿಂದ ಇರಬೇಕು. ಪರಸ್ಪರ ಸಹಕಾರ, ಸಹಬಾಳ್ವೆ, ಸಹನೆಯಿಂದ ಬದುಕುವ ಮೂಲಕ ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕಬೇಕು ಎಂದು ಬುದ್ಧಿಮಾತು ಹೇಳಿದರು.

ಇದೇ ವೇಳೆ ಭಗೀರಥ ಪೀಠದ ಡಾ.ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಸುಖಾ ಸುಮ್ಮನೆ ಕಲಹ ಮಾಡಿಕೊಂಡು ಕಾಲಹರಣ ಮಾಡುವ ಬದಲು ಕಾಯಕ ಮಾಡಿ. ಮಠಗಳಿಗೆ ಧರ್ಮಕ್ಕೆ ವಿನಮ್ರವಾಗಿ ನಡೆದುಕೊಂಡು ಸರಿಯಾದ ದಾರಿಯಲ್ಲಿ ಸಾಗಬೇಕು. ಸಮಸ್ಯೆಗಳಿದ್ದರೆ ಮಠಕ್ಕೆ ಅಥವಾ ದಲಿತ ಹಿಂದುಳಿದ ಮಠಾಧೀಶರ ಒಕ್ಕೂಟಕ್ಕೆ ತಿಳಿಸಿದ ಸಮಸ್ಯೆಗಳನ್ನು ಬಗೆಹರಿಸಲು ಆಗುವುದು. ಇನ್ನು ಮುಂದೆ ಕುಂಚಿಟಿಗ ಜನಾಂಗ ಹಾಗೂ ಉಪ್ಪಾರ ಜನಾಂಗ ಸಹೋದರರಂತೆ ಎಂದು ಎಚ್ಚರಿಸಿದರು.

ನಂತರ ಕಾಗಿನೆಲೆ ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ರಾಜಕಾರಣವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೇ ಕ್ರೀಡಾ ಮನೋಭಾವದಿಂದ ಸ್ವೀಕರಿಸಿ. ಎಲ್ಲರೂ ಪ್ರೀತಿಯಿಂದ ಬದುಕಿ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಮಧ್ಯೆ ಪರಸ್ಪರ ಹೊಂದಣಿಕೆ ಮುಖ್ಯ. ಆ ಕಾರಣಕ್ಕೆ ನಿವುಗಳು ಗುರುಗಳ ಮಾರ್ಗದರ್ಶನದಲ್ಲಿ ಸಾಗಬೇಕು ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv