ನೀವು ಜಯಿಸಬೇಕಾ? ಹಾಗಿದ್ರೆ ಕನ್ಯೆಯರನ್ನ ಕನಸಿನಲ್ಲೂ ನೆನೆಯಬೇಡಿ

‘ಈ ಬಾರಿ ನಾವು ಮತ್ತೆ ಗೆಲ್ಲ ಬೇಕಿದೆ. ಇದಕ್ಕಾಗಿ ಸಂಪೂರ್ಣವಾಗಿ ಪರಿಶ್ರಮ ಪಡಬೇಕಿದೆ. ಹಾಗೇನೇ ಕೆಲವೊಂದು ನಿರ್ಬಂಧಗಳನ್ನೂ ಅನುಸರಿಸಬೇಕಾಗಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ. ಈ ಒಂದು ತಿಂಗಳ ಮಟ್ಟಿಗೆ ಯಾರೂ ಕನ್ಯೆಯರ ಸಹವಾಸ ಮಾಡುವಂತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗುವಂತಿಲ್ಲ.’ ಫಿಫಾ ವಿಶ್ವಕಪ್‌ನಲ್ಲಿ ಆಡಲು ಅಣಿಯಾಗಿರುವ ಜರ್ಮನಿಯ ಫುಟ್‌ಬಾಲ್‌ ಆಟಗಾರರಿಗೆ, ತಂಡದ ಕೋಚ್‌ ವಿಧಿಸಿರುವ ಕಡ್ಡಾಯ ನಿರ್ಬಂಧವಿದು.
ಜೂನ್ 14ರಿಂದ ರಷ್ಯಾದಲ್ಲಿ ಫಿಫಾ ವಿಶ್ವಕಪ್ ಆರಂಭವಾಗ್ತಿದೆ. ಕಳೆದ ಬಾರಿಯ ಚಾಂಪಿಯನ್ ಜರ್ಮನಿ ತಂಡ, ಮತ್ತೊಮ್ಮೆ ಕಪ್ ಗೆದ್ದು ಚಾಂಪಿಯನ್‌ಶಿಪ್ ಉಳಿಸಿಕೊಳ್ಳುವ ಸಲುವಾಗಿ ಕಠಿಣ ತಾಲೀಮು ನಡೆಸಿದೆ. ಕಳೆದ ಬಾರಿ ಕಪ್‌ ಗೆಲ್ಲುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಜರ್ಮನಿಯ ಕೋಚ್‌ ಜೋಕಿಮ್‌ ಲೋ ಈ ಬಾರಿಯೂ ‘ಕಪ್‌ ನಮ್ದೇ’ ಆಗಬೇಕು ಅಂತಾ ಛಲ ತೊಟ್ಟಿದ್ದಾರೆ. ಬಹಳ ಕರಾರುವಕ್ಕಾಗಿ ತಂಡವನ್ನ ಆರಿಸಿರುವ ಕೋಚ್‌, ಅವರನ್ನು ಬುಲೆಟ್‌ಗಳಂತೆ ತಯಾರ್ ಮಾಡಿದ್ದಾರೆ. ಸೀದಾ ವಿಶ್ವಕಪ್‌ ಹೊಡೆಯಲು ಗುರಿಯಿಟ್ಟಿರುವ ಕೋಚ್‌, ತಂಡದ ಆಟಗಾರರು ಲಕ್ಷ್ಯದಿಂದ ಪಕ್ಕಕ್ಕೆ ಸರಿಯದಂತೆ ಕೆಲ ನಿರ್ಬಂಧಗಳನ್ನ ಹಾಕಿದ್ದಾರೆ. ಅವುಗಳ ಪೈಕಿ ಮುಖ್ಯವಾಗಿ ಗಮನ ಸೆಳೆದಿರುವ ನಿಯಮ ಅಂದ್ರೆ, ತಂಡದ ಆಟಗಾರರು ವಿಶ್ವಕಪ್ ನಡೆಯುವ ಒಂದು ತಿಂಗಳ ಮಟ್ಟಿಗೆ ಸೆಕ್ಸ್‌ ಮಾಡಬಾರದು ಅನ್ನೋದು. ಅಂದ್ರೆ ಜರ್ಮನಿ ತಂಡದ ಆಟಗಾರರು ಜೂನ್ 14ರಿಂದ ಜುಲೈ 15ರ ವರೆಗಿನ ಅವಧಿಯಲ್ಲಿ ಸೆಕ್ಸ್‌ ಮಾಡದಂತೆ ನಿಷೇಧ ವಿಧಿಸಲಾಗಿದೆ.

ಬರೀ ಇಷ್ಟೇ ಅಲ್ಲದೆ, ತಂಡದ ಆಟಗಾರರು ಸೋಷಿಯಲ್ ಮೀಡಿಯಾಗಳ ಕಡೆಗೂ ಕಣ್ಣೆತ್ತಿ ನೋಡದಂತೆ ಮತ್ತೂ ಒಂದು ನಿಷೇಧ ಹೇರಲಾಗಿದೆ. ಫೇಸ್‌ಬುಕ್‌ನಲ್ಲಿ ತಮಗೆಷ್ಟು ಲೈಕ್‌ಗಳು ಬಂದವು, ತಮ್ಮ ಬಗ್ಗೆ ಏನು ಚರ್ಚೆಯಾಗ್ತಾ ಇದೆ, ಏನು ಟೀಕೆಗಳು ಬರ್ತಾ ಇವೆ ಅನ್ನೋದರ ಕಡೆ ಗಮನಕೊಟ್ಟರೆ ಆಟಗಾರರ ಮನಸ್ಸು ವಿಚಲಿತವಾಗಬಹುದು ಅನ್ನೋ ಕಾರಣಕ್ಕೆ ಈ ನಿರ್ಬಂಧ ವಿಧಿಸಲಾಗಿದೆಯಂತೆ. ಆದ್ರೆ ಆಟಗಾರರು ಎಣ್ಣೆ ಹೊಡೆಯೋದಕ್ಕೇನೂ ಅಭ್ಯಂತರವಿಲ್ಲ ಅನ್ನೋದು ವಿಶೇಷ.
ಸೆಕ್ಸ್‌ ಮಾಡಿದ್ರೆ ಏನ್‌ ಸಮಸ್ಯೆ?
ಆಟಗಾರರು, ತಮ್ಮ ಪಾರ್ಟ್‌ನರ್‌ಗಳ ಜೊತೆ, ಗರ್ಲ್‌ಫ್ರೆಂಡ್‌ಗಳ ಜೊತೆ ಅಥವಾ ಬೇರಾವುದೇ ಸಂಗಾತಿಗಳ ಜೊತೆ ಬೆರೆತಲ್ಲಿ, ಅವರಿಗೆ ಮಹತ್ವ ನೀಡಿದಲ್ಲಿ, ಅಟೆನ್ಷನ್ ಡೈವರ್ಟ್ ಆಗ್ತಾರೆ. ವಯಕ್ತಿಕವಾಗಿ ತಮ್ಮ ಸಂಗಾತಿಗಳ ಬಗ್ಗೆ ಹೆಚ್ಚು ಗಮನ ಹರಿಸಿ, ತಂಡದ ಪ್ರಧಾನ ಲಕ್ಷ್ಯದ ಕಡೆ ಗಮನ ಕಳೆದುಕೊಳ್ತಾರೆ ಅನ್ನೋದು ಕೋಚ್‌ ಜೋಕಿಮ್‌ ವಾದ. ಇದಕ್ಕಾಗಿಯೇ ಸೆಕ್ಸ್‌ಗೆ ನಿಷೇಧ ಹೇರಲಾಗಿದೆಯಂತೆ.
ಹಾಗಾದ್ರೆ ಎಣ್ಣೆ ಹೊಡೆದರೆ ಪ್ರಾಬ್ಲಂ ಇಲ್ವಾ?
ಜರ್ಮನಿ ತಂಡದ ಆಟಗಾರರು ಒಂದು ತಿಂಗಳ ಮಟ್ಟಿಗೆ ರಷ್ಯಾದ ಹೋಟೆಲ್‌ಗಳಲ್ಲಿ ತಂಗುವಾಗ, ಯಾರೊಬ್ಬರಿಗೂ ಪ್ರತ್ಯೇಕ ಕೊಠಡಿಗಳನ್ನ ನೀಡೋದಿಲ್ಲ. ಆಟಗಾರರನ್ನು ಹೆಚ್ಚಾಗಿ ಗುಂಪು ಗುಂಪಾಗಿ ಹೋಟೆಲ್‌ನ ಕೆಲವೇ ಕೋಣೆಗಳಲ್ಲಿ ಒಟ್ಟಿಗಿರುವಂತೆ ಏರ್ಪಾಟು ಮಾಡಲಾಗ್ತಿದೆ. ಆಟಗಾರರು ಪರಸ್ಪರ ಒಟ್ಟಿಗೆ ಬೆರೆಯೋದ್ರಿಂದ, ಒಟ್ಟಿಗೆ ಡ್ರಿಂಕ್ಸ್‌ ಮಾಡ್ತಾ ಟೈಂ ಸ್ಪೆಂಡ್‌ ಮಾಡೋದ್ರಿಂದ ತಂಡದ ಸದಸ್ಯರ ನಡುವೆ ಸಲಿಗೆ ಹೆಚ್ಚಾಗುತ್ತೆ. ವಯಕ್ತಿಕ ಅಹಂಗೆ ಜಾಗವಿರೋದಿಲ್ಲ ಅನ್ನೋದು ಕೋಚ್‌ ಜೋಕಿಮ್‌ ಅಭಿಮತ. ಒಟ್ನಲ್ಲಿ ವಿಶ್ವಕಪ್‌ ಗೆಲ್ಲೋ ವರೆಗೂ ಜರ್ಮನಿ ತಂಡದ ಆಟಗಾರರು ಕಪ್‌ ಬಗ್ಗೆ ಮಾತ್ರವೇ ಕನಸು ಕಾಣಬೇಕಿದೆ ಹೊರತು, ಕನ್ಯೆಯರನ್ನ ಕನಸಿನಲ್ಲೂ ನೆನೆಸಿಕೊಳ್ಳುವಂತಿಲ್ಲ.

ವಿಶೇಷ ಬರಹ: ಜೆಫ್ರಿ ಅಯ್ಯಪ್ಪ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv