ಸರಣಿ ಕಳ್ಳತನ ಪ್ರಕರಣ: ಓಜುಕುಪ್ಪಂ ಗ್ಯಾಂಗ್​​ ಮೇಲೆ ಪೊಲೀಸರ ಕಣ್ಣು

ತುಮಕೂರು: ನಗರದಲ್ಲಿ ನಡೆಯುತ್ತಿರುವ ಸರಣಿ ಕಳ್ಳತನ ಪ್ರಕರಣ ಜಿಲ್ಲಾ ಪೊಲೀಸ್​ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನೆರೆಯ ಓಜುಕುಪ್ಪಂ ಗ್ಯಾಂಗ್​ ಸರಣಿ ಕಳ್ಳತನದಲ್ಲಿ ಮತ್ತೆ ತುಮಕೂರನ್ನು ಟಾರ್ಗೆಟ್​​ ಮಾಡಿಕೊಂಡಿದೆ ಎಂಬ ಅನುಮಾನ ಮೂಡಿದೆ.
ಇತ್ತೀಚೆಗೆ ಕ್ಯಾತ್ಸಂದ್ರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರು, ಓಜುಕುಪ್ಪಂ ನಿವಾಸಿಗಳಿಬ್ಬರನ್ನ ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ಈ ಘಟನೆ ನಡೆದ ಬೆನ್ನೆಲ್ಲೆ ಮತ್ತೆ ತುಮಕೂರು ನಗರದಲ್ಲಿ ಕೆಲವೆಡೆ ಮನೆಗಳ್ಳತನ ಪ್ರಕರಣಗಳು ಮರು ಕಳುಹಿಸಿವೆ. ಇನ್ನು ನಗರದ ಸಿಎಸ್ಐ ಲೇಔಟ್ ಮನೆಯೊಂದರಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಹೋಗಿ ಮನೆಯಲ್ಲಿದ್ದ ವಯೋವೃದ್ಧೆಯನ್ನು ಬೆದರಿಸಿ ಕಳ್ಳತನ ಎಸಗಿ ಪರಾರಿಯಾಗಿದ್ದರು. ಇದರಿಂದ ನಗರದ ನಿವಾಸಿಗಳು ಆತಂಕಗೊಂಡಿದ್ದರು.
ನಗರದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣವನ್ನು ನಿಯಂತ್ರಿಸುವುದು ಜಿಲ್ಲಾ ಪೊಲೀಸ್​ ಇಲಾಖೆಗೆ ದೊಡ್ಡ ಸವಾಲಾಗಿದೆ. ಪ್ರಕರಣವನ್ನು ಹೇಗಾದರೂ ಬೇಧಿಸಿ ಕಳ್ಳರನ್ನು ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದಾರೆ. ನಗರದ ಹಳೇ ರೌಡಿಗಳು, ಕಳ್ಳರು, ಶಂಕಿತ ಕಳ್ಳರನ್ನೆಲ್ಲಾ ಕರೆದು ವಿಚಾರಣೆ ನಡೆಸಿದ್ದಾರೆ. ಅದರೂ ಕೃತ್ಯವೆಸಗಿದವರನ್ನು ಪತ್ತೆ ಹಚ್ಚಲು ಪೊಲೀಸ್​ ಇಲಾಖೆಗೆ ಸುಳಿವು ದೊರೆತಿಲ್ಲ.
ಓಜುಕುಪ್ಪಂ ಗ್ಯಾಂಗ್​​ ಮೇಲೆ ಪೊಲೀಸರ​ ಕಣ್ಣು
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಪೊಲೀಸರಿಗೆ ಓಜುಕುಪ್ಪಂ ಗ್ಯಾಂಗ್​​ ಮತ್ತೆ ನಗರದಲ್ಲಿ ಕೈ ಚಳಕ ತೋರುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ನೆರೆಯ ಆಂಧ್ರಪ್ರದೇಶದಲ್ಲಿರುವ ಓಜಕುಪ್ಪಂನ ಕಳ್ಳರು ಇರಾನಿ ಗ್ಯಾಂಗ್​ಗಿಂತ ಕುಖ್ಯಾತರು ಎನ್ನಲಾಗಿದೆ. ಇಲ್ಲಿನ ಕೆಲ ನಿರುದ್ಯೋಗಿಗಳು ಕಳ್ಳತನವನ್ನೇ ಉದ್ಯೋಗವನ್ನಾಗಿಸಿಕೊಂಡು ಖದೀಮರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ, ಮೈಸೂರು, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಓಜುಕುಪಂ ಗ್ಯಾಂಗ್​ ಹೆಚ್ಚಾಗಿ ಕೃತ್ಯವೆಸಗಿ ಹಿಂದಿರುಗುತ್ತಾರೆ ಎನ್ನಲಾಗಿದೆ. ಸ್ಥಳೀಯವಾಗಿ ಬೀಡುಬಿಟ್ಟು ಸ್ಕೆಚ್​​ ಹಾಕ್ತಾರೆ. ಬ್ಯಾಂಕ್‌ನಲ್ಲಿ ಹೆಚ್ಚು ಹಣ ಡ್ರಾ ಮಾಡುವವರು,‌ ಒಂಟಿ ಮಹಿಳೆ ಇರುವ ಮನೆಗಳೇ ಇವರ ಟಾರ್ಗೆಟ್. ಇನ್ನು, ಈ ಜಾಲವನ್ನು ಕಂಡುಹಿಡಿದ ಪೊಲೀಸರಿಗೆ ಈಗ ಇವರನ್ನು ಪತ್ತೆಹಚ್ಚುವುದು ಒಂದು ಸವಾಲಾಗಿದೆ. ಓಜುಕುಪ್ಪಂ ಗ್ಯಾಂಗ್​ನ ಕಳ್ಳರನ್ನು ಬಂಧಿಸಲು ಪೊಲೀಸರು ಮಾರುವೇಶದಲ್ಲಿ ತೆರಳಿದರೂ ಎಷ್ಟೋ ಬಾರಿ ವಿಫಲರಾಗಿದ್ದಾರೆ. ಓಜುಕುಪ್ಪಂನಲ್ಲಿ ಕಳ್ಳರು ಎಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ ತಿಳಿಯುವುದಿಲ್ಲ. ಒಂದು ವೇಳೆ ಕಳ್ಳರನ್ನು ಬಂಧಿಸಲು ಮುಂದಾದರೆ ಅಲ್ಲಿನ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಹೇಳುತ್ತಾರೆ.
ಕ್ಯಾತ್ಸಂದ್ರ ಠಾಣೆ ಪಿಎಸ್‌ಐ ರಾಜು ನೇತೃತ್ವದ ತಂಡ ಇತ್ತೀಚೆಗೆ ತಮ್ಮ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಬೇಧಿಸಿ ಓಜುಕುಪ್ಪಂನ ಇಬ್ಬರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತರಿಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದು ಹಿರಿಯ ಅಧಿಕಾರಿಗಳ ಅಚ್ಚರಿ ಹಾಗೂ ಪ್ರಶಂಸೆಗೂ ಕಾರಣವಾಗಿತ್ತು.
ಈ ಹಿಂದೆ ಇರಾನಿ ಗ್ಯಾಂಗ್‌ನ ಸರಗಳ್ಳತನದಿಂದ ರೋಸಿಹೋಗಿದ್ದ ನಗರದ‌ ನಿವಾಸಿಗಳಿಗೆ ಇದೀಗ ಓಜುಕುಪ್ಪಂ ಗ್ಯಾಂಗ್ ಹಾವಳಿಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಪೊಲೀಸರು ಬಿರುಸಿನ ಕಾರ್ಯಾಚರಣೆ ಕೈಗೊಂಡಿದ್ದು ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ.

ವಿಶೇಷ ವರದಿ: ಹೆಬ್ಬಾಕ ತಿಮ್ಮೇಗೌಡ
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv