ಮತ್ತೆ ಸದ್ದು ಮಾಡ್ತಿದೆ ಪ್ರತ್ಯೇಕ ರಾಜ್ಯದ ಕೂಗು..!

ಕಲಬುರಗಿ: ಉತ್ತರ ಕರ್ನಾಟಕ ಭಾಗದಿಂದ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ ಜನಪ್ರತಿನಿಧಿಗಳು ಎನೋ ಒಂದು ಭರವಸೆ ನೀಡುವ ಮೂಲಕ ಪ್ರತ್ಯೇಕತೆಯ ಸದ್ದನ್ನ ಹತ್ತಿಕ್ಕುವ ಕೆಲಸ ಮಾಡುತ್ತಾರೆ. ಆದರೆ ನಿನ್ನೆ ಮಂಡನೆಯಾದ ರಾಜ್ಯ ಬಜೆಟ್​ನಲ್ಲಿ ಉತ್ತರ ಕರ್ನಾಟಕ ಭಾಗವನ್ನ ಕಡೆಗಣಿಸಲಾಗಿದೆ  ಎಂಬ ಕೂಗು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮತ್ತೆ ಪ್ರತ್ಯೇಕತೆಯ ಹೋರಾಟ ಚುರುಕು ಪಡೆದಿದೆ.

ಅದೇ ರೀತಿ ನಮ್ಮ ಭಾಗಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತ ಸಮಿತಿಯಿಂದ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ‌ ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ತೆಲಂಗಾಣ ಮಾದರಿಯಲ್ಲೇ ನಮಗೂ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ರು. ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ, ಮಂತ್ರಿ ಮಂಡಳ ರಚನೆಯಲ್ಲಿಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಆದರೆ ಬಜೆಟ್​ನಲ್ಲಿ ಏನಾದರೂ‌‌ ಹೆಚ್ಚಿನ ಅನುದಾನ ನೀಡುತ್ತಾರೆಂಬ ನಿರೀಕ್ಷೆಯಿತ್ತು. ಅದೂ ಹುಸಿಯಾಗಿದೆ. ಹಾಗಾಗಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಕುರಿತು ಈ ಭಾಗದಲ್ಲಿ ಜನಜಾಗೃತಿ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv