ಶ್ವೇತವರ್ಣತೊಟ್ಟುನಿಂತ ಮಂಜಿನ ನಗರಿ..!

ಕೊಡಗು: ಜಿಲ್ಲೆಯಲ್ಲಿ ಮಳೆಗಾಲ ಬಂದ್ರೆ ಅದೇನೋ ರೋಮಾಂಚನ. ಬಿಸಿಲಿಗೆ ಬಸವಳಿದಿದ್ದ ಜೀವ ಸಂಕುಲ ಹೊಸ ಕಳೆಯೊಂದಿಗೆ ನಳನಳಿಸುತ್ತದೆ. ದಣಿದ ಮೈಮನ ಉಲ್ಲಸಿತಗೊಳ್ಳುತ್ತದೆ. ಮಳೆ ಬಂದ ನಂತರ ಕೊಡಗಿನ ಸುಂದರ ಪರಿಸರವನ್ನು ನೋಡುತ್ತಿದ್ರೆ ನಮ್ಮನ್ನು ನಾವು ಮರೆಯುತ್ತೇವೆ. ಅದರೊಳಗೆ ನಾವೂ ಒಂದಾಗಿ ಬಿಡುತ್ತೇವೆ. ಇಂಥ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡೋದು ಮಂಜಿನ ಹನಿಗಳು. ಕೊಡಗು ಅಂದಾಕ್ಷಣ ಮಂಜಿನ ನಗರಿ ಅನ್ನೋ ಇಲ್ಲಿನ ಐಡೆಂಟಿಟಿ ನೆನಪಾಗುತ್ತೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿರೋದ್ರಿಂದ ಜಿಲ್ಲೆಯ ವಿವಿಧೆಡೆ ಮಂಜಿನ ಹನಿಗಳು ತನ್ನ ಲೀಲೆಯನ್ನು ತೆರೆದುಕೊಂಡಿವೆ. ಬೆಟ್ಟ-ಗುಡ್ಡ, ರಸ್ತೆ, ಕಾಡು ಹೀಗೆ ಎಲ್ಲಿ ನೋಡಿದರೂ ಹಸಿರ ಪರಿಸರದಲ್ಲಿ ಶ್ವೇತವರ್ಣ ಸುಂದರಿಯರ ಓಡಾಟ ಕಾಣೋದಕ್ಕೆ ಸಿಗುತ್ತಿದೆ. ಮುಂಜಾವಿನ ವೇಳೆ, ಮಳೆ ಬಂದು ಹೋದ ನಂತರದಲ್ಲಿ ದರ್ಶನ ನೀಡುವ ಮಂಜಿನ ಹನಿಗಳು ಮೈ ಸೋಕಿದರೆ ಅದೇನೋ ವಿಶೇಷ ಅನುಭವವಾಗತ್ತೆ. ಕೊಡಗಿಗೆ ಬರುತ್ತಿರುವ ಪ್ರವಾಸಿಗರು ಇಂಥ ಬ್ಯೂಟಿಫುಲ್ ವೆದರ್​ಗೆ ಫಿದಾ ಆಗ್ತಿದ್ದಾರೆ. ಮಂಜಿನ ಹನಿಗಳಿಗೆ ಮೈವೊಡ್ಡಿ ಫೋಟೋ ಕ್ಲಿಕ್ಕಿಸ್ತಾ ಎಂಜಾಯ್ ಮಾಡ್ತಿದ್ದಾರೆ.

ಮತ್ತೊಂದೆಡೆ ಮುಂಜಾನೆ ವೇಳೆಯಲ್ಲಿ ಹಸಿರ ಪರಿಸರದಲ್ಲಿ ಕಡಲ ಅಲೆಯಂತೆ ಕಂಡುಬರುವ ದಟ್ಟ ಮಂಜು, ಶ್ವೇತ ಸಾಗರವನ್ನು ನೆನಪಿಸುತ್ತದೆ. ವ್ಯೂ ಪಾಯಿಂಟ್‍ಗಳಲ್ಲಿ ನಿಂತು ಆ ದೃಶ್ಯ ವೈಭವವನ್ನು ನೋಡ್ತಿದ್ರೆ ಸಮುದ್ರ ದಂಡೆಯಲ್ಲಿ ನಿಂತಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಜಿಲ್ಲೆಯಲ್ಲಿ ಮಳೆಗಾಲ ಆರಂಭದ ಕಾಲ ಇದು, ಮುಂದಿನ ದಿನಗಳಲ್ಲಿ ಇಂಥ ದೃಶ್ಯ ಕಾವ್ಯ ನಿರಂತರವಾಗಿ ಕಾಣಸಿಗುತ್ತವೆ.

ವಿಶೇಷ ಬರಹ: ಕಿಶೋರ್​ ರೈ