‘ದುಷ್ಟ ಶಕ್ತಿಗಳೊಂದಿಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿರುವುದು ಖೇದಕರ’

ಮಂಗಳೂರು: ಚುನಾವಣೆಯಲ್ಲಿ ಎಸ್​ಡಿಪಿಐಯೊಂದಿಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದ್ದಾರೆಂಬ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ಸಾಧ್ವಿ ಬಾಲಿಕಾ ಸರಸ್ವತಿ, ಹಿಂದೂಗಳನ್ನು ಹತ್ಯೆ ಮಾಡಿದ ದುಷ್ಟ ಶಕ್ತಿಗಳೊಂದಿಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿರುವುದು ಖೇದಕರ. ಇದರಿಂದ ಮುಂಬರುವ ದಿನಗಳಲ್ಲಿ ಹಿಂದೂಗಳ ಸ್ಥಿತಿ ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುವಾಗಲೇ ಕೆಲವರಿಗೆ ಧರ್ಮಸ್ಥಳ ಹಾಗೂ ಹಿಂದೂಗಳ ದೇವಾಲಯಗಳ ನೆನಪಾಗುತ್ತದೆ. ರಾಹುಲ್ ಗಾಂಧಿಯವರ ಟೆಂಪಲ್ ರನ್ ಮುಂದುವರಿದಿದ್ದು, ಅಯೋಧ್ಯೆಯಲ್ಲೂ ರಾಮಮಂದಿರವಿದೆ. ಟೆಂಪಲ್ ರನ್ ಅಲ್ಲಿಗೂ ತಲುಪುವಂತಾಗಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವ್ಯಂಗ್ಯವಾಡಿದರು.
ದೇಶದಲ್ಲಿ ಗೋವುಗಳು ಹಾಗೂ ಮಹಿಳೆಯರು ಸುರಕ್ಷಿತರಿಲ್ಲ, ಲವ್ ಜಿಹಾದ್ ಭ್ರೂಣ ಹತ್ಯೆ ಸೇರಿದಂತೆ ಇನ್ನಿತರ ರೀತಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ಸಾಧ್ವಿ ಬಾಲಿಕಾ ಸರಸ್ವತಿ ಹರಿಹಾಯ್ದರು. ಇನ್ನೂ‌‌ ಗೋವುಗಳು ಸುರಕ್ಷಿತವಾಗಬೇಕಾದರೆ ಈ ಕೂಡಲೇ ದೇಶಾದ್ಯಂತ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಬೇಕು ಸಾದ್ವಿ‌ ಒತ್ತಾಯಿಸಿದರು.