ಸಿಬಿಐ ತಿಕ್ಕಾಟ! ಕೇಂದ್ರದ ಆತುರವೇಕೆ ಎಂದು ಪ್ರಶ್ನಿಸುತ್ತಾ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್​

ನವದೆಹಲಿ: ಅಕ್ಟೋಬರ್ 23 ರಂದು ರಾತ್ರೋ ರಾತ್ರಿ ತಮ್ಮನ್ನು ಅಧಿಕಾರದಿಂದ ದೂರವಿಟ್ಟು, ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಸಿಬಿಐ ನಿರ್ದೇಶಕ ಅಲೋಕ್​ ಕುಮಾರ್​​ ವರ್ಮಾ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಇವರ ಜೊತೆಗೆ ಎನ್​ಜಿಒ ಸಂಸ್ಥೆಯೊಂದು ಸಹ ಪ್ರಶ್ನಿಸಿತ್ತು. ಈ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್‌ ನೇತೃತ್ವದ ನ್ಯಾಯಪೀಠ, ಇಂದು ವಾದ- ಪ್ರತಿವಾದ ಅಂತಿಮಗೊಳಿಸಿ, ತೀರ್ಪನ್ನು ಕಾಯ್ದಿರಿಸಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರ, ಕೇಂದ್ರ ವಿಚಕ್ಷಣಾ ದಳ ಪ್ರಮುಖ ಪ್ರತಿವಾದಿಗಳಾಗಿದ್ದಾರೆ.

ಈ ಮಧ್ಯೆ ಕೇಂದ್ರ ಸರ್ಕಾರವು ಸಿಬಿಐ ಸಂಸ್ಥೆಯಲ್ಲಿ ಇಬ್ಬರು ಉನ್ನತಾಧಿಕಾರಿಗಳ (ಮತ್ತೊಬ್ಬರು ಉಪ ನಿರ್ದೇಶಕ ರಾಕೇಶ್ ಅಸ್ತಾನ) ಮಧ್ಯೆ ತಿಕ್ಕಾಟ ನಡೆಯುತ್ತಿತ್ತು. ಇದು ಸಿಬಿಐ ಕಾರ್ಯವೈಖರಿ ಮೇಲೆ ಪರಿಣಾಮ ಬೀರುತ್ತಿತ್ತು. ಇದನ್ನು ಸರಿಪಡಿಸಲು ನಾವೇ ಅಲೋಕ್​ ಕುಮಾರ್​​ ವರ್ಮಾ ಅವರನ್ನ ಕರ್ತವ್ಯದಿಂದ ಮುಕ್ತಿಗೊಳಿಸಿ, ರಜೆ ಮೇಲೆ ಕಳಿಸಿದೆವು. ಆದ್ರೆ ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪದಿಂದಾಗಿ ಅವರನ್ನು ಕೆಲಸದಿಂದ ಮುಕ್ತಗೊಳಿಸಿದ್ದಲ್ಲ ಎಂದು ಕೇಂದ್ರ ಸರ್ಕಾರ ತನ್ನ ನಿಲುವನ್ನು ಕೋರ್ಟ್​​ ಎದುರು ಮಂಡಿಸಿತು.
ಇದಕ್ಕೂ ಮುನ್ನ, ನಿರ್ದೇಶಕ ಅಲೋಕ್​ ಕುಮಾರ್​​ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸುವ ಮುನ್ನ ಮತ್ತೊಬ್ಬ ನಿರ್ದೇಶಕ ಎ.ಕೆ. ಬಸ್ಸಿ ಅವರನ್ನ ಪೋರ್ಟ್ ಬ್ಲೇರ್‌ಗೆ ವರ್ಗಾವಣೆ ಮಾಡಿತ್ತು. ಇದೀಗ ಬಸ್ಸಿ ಸಹ ವಕೀಲರ ಮೂಲಕ ತಮ್ಮ ವರ್ಗಾವಣೆಯನ್ನು ವಿರೋಧಿಸಿ, ತಮ್ಮ ಮಾತುಗಳನ್ನೂ ಆಲಿಸಿಬೇಕೆಂದು ಸುಪ್ರೀಂಕೋರ್ಟ್​​ ಗಮನ ಸೆಳೆದಿದ್ದು ಕೋರ್ಟ್​ ಅದಕ್ಕೆ ಸಮ್ಮತಿ ನೀಡಿದೆ. ಈ ಮಧ್ಯೆ, ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ವಿಚಕ್ಷಣಾ ದಳ, ಅಸಾಮಾನ್ಯ ಸಂದರ್ಭಗಳಲ್ಲಿ ಅಸಾಮಾನ್ಯ ಪರಿಹಾರಗಳು ಅಗತ್ಯವಿದೆ ಎಂದು ಅಲೋಕ್‌ ವರ್ಮಾ ಮನವಿಯ ಬಗ್ಗೆ ಸುಪ್ರೀಂಕೋರ್ಟ್‌ ಗಮನ ಸೆಳೆದರು. ಇಂತಹುದೇ ವಿಚಾರಗಳಿಗೆ ಸಂಬಂಧಪಟ್ಟಂತೆ ಹಿಂದಿನ ಸರ್ವೋಚ್ಛ ನ್ಯಾಯಾಲಯಗಳ ತೀರ್ಪಿನ ಬಗ್ಗೆ ಹಾಗೂ ಸಿಬಿಐ ಕಾನೂನಿನ ಬಗ್ಗೆಯೂ ಕೋರ್ಟ್​​ಗೆ ಮಾಹಿತಿ ನೀಡಿದರು.
ಈ ಮಧ್ಯೆ, ಸಿಬಿಐ ನಿರ್ದೇಶಕ ಹಾಗೂ ವಿಶೇಷ ನಿರ್ದೇಶಕರ ನಡುವಿನ ಜಗಳ ರಾತ್ರೋರಾತ್ರಿ ನಡೆಯಲಿಲ್ಲ. ಅಲ್ಲದೆ, ಕೇಂದ್ರ ಸರಕಾರ ಈ ವಿಚಾರವಾಗಿ ನ್ಯಾಯೋಚಿತ ಕ್ರಮ ಕೈಗೊಳ್ಳಬೇಕು. ಸಿಬಿಐ ನಿರ್ದೇಶಕರನ್ನು ಅಧಿಕಾರದಿಂದ ಕಿತ್ತೊಗೆಯುವ ಮುನ್ನ ಆಯ್ಕೆ ಸಮಿತಿಯ ಸಲಹೆಯನ್ನೇಕೆ ಪಡೆಯಲಿಲ್ಲ ಎಂಬ ಬಗ್ಗೆ ತಿಳಿಯ ಬಯಸುತ್ತೇವೆ. ಈ ನಿರ್ಧಾರ ಕೈಗೊಳ್ಳಲು ಆತುರ ಪಟ್ಟಿದ್ದೇಕೆ ಎಂದು ಸಿಜೆಐ ರಂಜನ್ ಗೊಗೊಯ್‌ ನೇತೃತ್ವದ ನ್ಯಾಯಪೀಠ ಪ್ರಶ್ನಿಸಿದೆ.