ನೀವು ದೇಶವನ್ನು ಶಾಂತಿಯಿಂದಿರಲು ಬಿಡುವುದಿಲ್ಲವೇ? -ಸುಪ್ರೀಂ ಪ್ರಶ್ನೆ

ನವದೆಹಲಿ: ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ಶ್ರೀರಾಮನ ಪೂಜೆಗೆ ಅವಕಾಶ ಮಾಡಿಕೊಡಬೇಕು ಅಂತ ಕೇಳಿದ್ದ ಅರ್ಜಿದಾರನನ್ನ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ದೇಶವನ್ನು ಶಾಂತಿಯಿಂದಿಡಲು ಬಿಡುವುದಿಲ್ಲವೇ. ನಿಮ್ಮದು ಯಾವಾಗಲೂ ಏನಾದರೂ ಒಂದು ಇದ್ದೇ ಇರುತ್ತೆ ಅಂತಾ ಕ್ಲಾಸ್​ ತೆಗೆದುಕೊಂಡ ಸಿಜೆ ರಂಜನ್​​ ಗೊಗೋಯಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಪಂಡಿತ್ ಅಮರನಾಥ್ ಮಿಶ್ರಾ 1992ರ ಬಾಬ್ರಿ ಮಸೀದಿ ಧ್ವಂಸದ ನಂತರ ಸರ್ಕಾರದ ವಶದಲ್ಲಿರೋ 67.7 ಎಕರೆ ಜಾಗದಲ್ಲಿ ಪೂಜೆಗೆ ಅವಕಾಶ ಕಲ್ಪಿಸಿಕೊಡಬೇಕು ಅಂತಾ ಅಲಹಾಬಾದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ರು. ಹೈಕೋರ್ಟ್​ ಕೇವಲ ಅರ್ಜಿ ವಜಾಗೊಳಿಸಿದ್ದಷ್ಟೆಯಲ್ಲದೇ ಮಿಶ್ರಾಗೆ 5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿತ್ತು. 5 ಲಕ್ಷ ರೂಪಾಯಿ ದಂಡದ ಶಿಕ್ಷೆ ಪ್ರಶ್ನಿಸಿದಾಗ ಸುಪ್ರೀಂ ಕೋರ್ಟ್​ ಕೂಡ ಹೈಕೋರ್ಟ್​ ಆದೇಶವನ್ನು ಎತ್ತಿ ಹಿಡಿದಿದೆ. ಈ ಹಿಂದೆ ವಿವಾದಿತ ಜಾಗದಲ್ಲಿ ನಮಾಜ್ ಮಾಡಲು ಅವಕಾಶ ನೀಡಬೇಕು ಅಂತ ಸಲ್ಲಿಸಿದ್ದ ಅರ್ಜಿಯನ್ನೂ ಅಲಹಾಬಾದ್ ಹೈಕೋರ್ಟ್​ ವಜಾಗೊಳಿಸಿತ್ತು. ಇವೆಲ್ಲಾ ಪಬ್ಲಿಸಿಟಿಗಾಗಿ ಸಲ್ಲಿಸೋ ಅರ್ಜಿಗಳು ಅಂತ ಹೇಳಿ 5 ಲಕ್ಷ ರೂಪಾಯಿ ಫೈನ್​ ಹಾಕಿತ್ತು.