ನಾಳೆ ‘ಕೈ’ ಅತೃಪ್ತ ಶಾಸಕರ ಸಭೆ: ಬೆಂಗಳೂರಿನತ್ತ ಸತೀಶ್​ ಜಾರಕಿಹೊಳಿ

ಬೆಳಗಾವಿ: ಸಚಿವ ಸ್ಥಾನ ಕೈ ತಪ್ಪಿದಕ್ಕೆ ಅತೃಪ್ತಗೊಂಡಿರುವ ಕಾಂಗ್ರೆಸ್‌ನ 20ಕ್ಕೂ ಅಧಿಕ ಶಾಸಕರು ಮತ್ತೇ ನಾಳೆ ಮಾಜಿ ಸಚಿವ ಎಂ.ಬಿ. ಪಾಟೀಲ್​ರ ಬೆಂಗಳೂರಿನ ನಿವಾಸದಲ್ಲಿ ಸಭೆ ನಡೆಸಲಿದ್ದಾರೆ. ಎಂ.ಬಿ. ಪಾಟೀಲರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಇಂದು ಮಧ್ಯಾಹ್ನ 3:30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಜಾರಕಿಹೊಳಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ಬೆಂಗಳೂರಿಗೆ ತೆರಳಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತ ಪಡಿಸಿವೆ.

ಅತೃಪ್ತ ಶಾಸಕರ ಪರವಾಗಿ ವಕಾಲತ್ತು ವಹಿಸಲು ಎಂ.ಬಿ. ಪಾಟೀಲ್ ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿ ಚರ್ಚೆ ನಡೆಸಿ ಬಂದಿದ್ದಾರೆ. ತಮ್ಮ ಬೇಡಿಕೆಗೆ ಹೈ ಕಮಾಂಡ್ ನೀಡಿದ ಉತ್ತರವೇನು ಹಾಗೂ ತಮ್ಮ ಮುಂದಿನ‌ ನಿರ್ಧಾರದ ಬಗ್ಗೆ ನಾಳಿನ ಸಭೆ ಮಹತ್ವ ಪಡೆದುಕೊಂಡಿದೆ. ನಿನ್ನೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸತೀಶ್ ಜಾರಕಿಹೊಳಿ, ಸಚಿವ ಸ್ಥಾನ ಪಡೆಯಲು ಹಾಗೂ ತಮ್ಮ ಬೆಂಬಲಿಗ ಶಾಸಕರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ವಿಫಲನಾಗಿದ್ದೇನೆ. ಬೆಂಬಲಿಗರ ಜತೆಗಿನ ಸಭೆಯ ಬಳಿಕ ಎರಡು ದಿನಗಳಲ್ಲಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಾಹಿತಿ ನೀಡಿದ್ದರು. ನಾಳೆ ನಡೆಯುವ ಅತೃಪ್ತ ಶಾಸಕರ ಸಭೆಯಲ್ಲಿ ಜಾರಕಿಹೊಳಿ ಈ ಬಗ್ಗೆ ನಿರ್ಣಯ ‌ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv