ರಂಗು ರಂಗಾಯ್ತು ರಿಷಬ್ ದತ್ತು ಪಡೆದ ಸರ್ಕಾರಿ ಶಾಲೆ!

ಕನ್ನಡ ಶಾಲೆಯ ಉಳಿವಿಗಾಗಿ ಹೊಸತನದಲ್ಲಿ ಮೂಡಿಬಂದ ಸಿನಿಮಾ ಅಂದ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು. ಅನಂತ್ ನಾಗ್​ ಮುಖ್ಯ ಭೂಮಿಕೆಯಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಶತದಿನ ಪೂರೈಸಿ ಸ್ಯಾಂಡಲ್​ವುಡ್​ನಲ್ಲಿ ಹೊಸ ದಾಖಲೆ ಬರೆದಿತ್ತು. ಇತ್ತೀಚಿನ ಆಂಗ್ಲ ಮಾಧ್ಯಮದ ಪ್ರಭಾವದಿಂದಾಗಿ ಕನ್ನಡ ಶಾಲೆಗಳು ಅಳಿವಿನಂಚಿರುವುದನ್ನೇ ಕಥೆಯಾಗಿರಿಸಿಕೊಂಡು ರಿಷಬ್ ಅದ್ಭುತವಾಗಿ ಕಥೆ ಹೆಣೆದಿದ್ರು. ಚಿತ್ರದ ಚಿತ್ರೀಕರಣವನ್ನ ಕರಾವಳಿ ಭಾಗ ಹಾಗೂ ಕಾಸರಗೋಡಿನ ಕೈರಂಗಳ ಗ್ರಾಮದ ಶಾಲೆಯಲ್ಲಿ ನಡೆಸಿದ್ದ ಚಿತ್ರತಂಡ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡೋದಾಗಿ ಹೇಳಿತ್ತು. ಅದರಂತೆ ರಿಷಬ್ ಅಂಡ್ ಟೀಮ್ ಜೊತೆಯಾಗಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಡಿಸೈಡ್ ಮಾಡಿತ್ತು. ಈಗ ಆ ಶಾಲೆ ಹೊಸ ರೂಪ ಪಡೆದುಕೊಂಡಿದೆ.

ಮಾದರಿ ಶಾಲೆಯಾಯ್ತು ಕಾಸರಗೋಡು.!
ಚಿತ್ರೀಕರಣದ ವೇಳೆ ಹೇಳಿದಂತೆ ಚಿತ್ರತಂಡ ಶಾಲೆಗೆ ಹೊಸದಾಗಿ ಸುಣ್ಣ, ಬಣ್ಣ ಬಳಿದು ಮಾಡ್ರನ್ ಶಾಲೆಯನ್ನಾಗಿ ಮಾಡಿದೆ. ಜೊತೆಗೆ ಶಾಲೆಯ ಗೋಡೆಯ ತುಂಬೆಲ್ಲಾ ಕಲೆ, ಸಾಹಿತ್ಯ, ಪರಿಸರಕ್ಕೆ ಸಂಬಂಧಿಸಿದ ಬಣ್ಣ ಬಣ್ಣದ ಆಕರ್ಷಕ ಚಿತ್ರಗಳನ್ನು ಬಿಡಿಸುವ ಮೂಲಕ ಹೊಸ ರೂಪ ನೀಡಿದೆ. ಬೇಸಿಗೆ ರಜೆ ಕಳೆದು ಬರುವ ಮಕ್ಕಳಿಗೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನದ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭವಾಗಲಿ ಅಂತಾ ಚಿತ್ರತಂಡ ಹಾರೈಸಿದೆ. ಇನ್ನು, ಮಕ್ಕಳೇ ಪ್ರಧಾನವಾಗಿ ನಟಿಸಿದ್ದ ಚಿತ್ರ ದೇಶ, ವಿದೇಶಾದ್ಯಂತ ತೆರೆಕಂಡು 125 ಕ್ಕೂ ಹೆಚ್ಚು ದಿನಗಳನ್ನು ಪೂರೈಸಿದೆ. ಒಂದು ಕನ್ನಡ ಶಾಲೆ ಮುಚ್ಚುವ ಹಂತ ತಲುಪಿದಾಗ ಮಕ್ಕಳೇ ಹೋರಾಡಿ ಶಾಲೆಯನ್ನು ಹೇಗೆ ಉಳಿಸಿಕೊಳ್ತಾರೆ ಅನ್ನೋ ಒನ್​ಲೈನ್ ಸ್ಟೋರಿಯನ್ನು ಚಿತ್ರ ಹೊಂದಿತ್ತು. ಏನೇ ಆದ್ರೂ ಕನ್ನಡ ಶಾಲೆಯ ಉಳಿವಿಗಾಗಿ ಸಹಕಾರ ನೀಡ್ತೀರೋದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ.