‘ಕುಮಾರಸ್ವಾಮಿ 5 ವರ್ಷ ಸಿಎಂ ಆಗಿರಲು ಜೆಡಿಎಸ್‌ ಶಾಸಕರು ಯಾವುದೇ ತ್ಯಾಗಕ್ಕೂ ಸಿದ್ಧ’

ಮೈಸೂರು: ಕುಮಾರಸ್ವಾಮಿ 5 ವರ್ಷ ಸಿಎಂ ಆಗಿರಲು ಜೆಡಿಎಸ್‌ನ ಶಾಸಕರು ಎಂಥಾ ತ್ಯಾಗಕ್ಕೂ ಸಿದ್ಧ ಅಂತಾ ಸಚಿವ ಸಾರಾ ಮಹೇಶ್​ ಹೇಳಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಮಂತ್ರಿಮಂಡಲ ವಿಸ್ತರಣೆ ಅಥವಾ ಪುನರ್‌ ರಚನೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾರು ಮಂತ್ರಿ ಆಗಬೇಕು, ಯಾರು ಅಧಿಕಾರಲ್ಲಿರಬೇಕು ಅಂತ ಯೋಚನೆ ಇಲ್ಲ. ರೈತರು ಉಳಿಯಬೇಕು, ಹೀಗಾಗಿ ಕುಮಾರಸ್ವಾಮಿ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಸಿದ್ಧ. ರಾಜ್ಯದ ಹಿತದೃಷ್ಟಿಯಿಂದ ಕುಮಾರಸ್ವಾಮಿ 5 ವರ್ಷ ಸಿಎಂ ಆಗಿರಬೇಕು. ಇದಕ್ಕೆ ನಾನು ಸೇರಿದಂತೆ ಜೆಡಿಎಸ್‌ ಎಲ್ಲಾ ಶಾಸಕರೂ ತ್ಯಾಗಕ್ಕೆ ಸಿದ್ಧರಾಗಿದ್ದೇವೆ ಅಂತಾ ಹೇಳಿದರು.

ಪಾರಂಪರಿಕತೆಗೆ ಧಕ್ಕೆ ತರಬೇಡಿ..
ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಕೆಲಸದ ವಿಚಾರದಲ್ಲಿ ಸಂಸದ ಹಾಗೂ ಸಚಿವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಹಿಂದೆ ಸಂಸದ ಪ್ರತಾಪ್​ ಸಿಂಹ ಕೇಂದ್ರ ಸರ್ಕಾರದ ಕೆಲಸ ನಾವು ಮಾಡುತ್ತೇವೆ ಎಂದಿದ್ರು. ಆದ್ರೆ, ಸಚಿವ ಸಾರಾ ಮಹೆಶ್​ ಪಾರಂಪರಿಕತೆಗೆ ಧಕ್ಕೆ ತರಬೇಡಿ ಅಂತಾ ಹೇಳಿದ್ರು. ಇಂದು ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಸಾರಾ ಮಹೇಶ್ ಪ್ರತ್ಯೇಕವಾಗಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಪರಿಶೀಲನೆ ನಂತರ ಮಾತನಾಡಿದ ಸಚಿವರು, ಮೈಸೂರು ಕೇಂದ್ರ ರೈಲ್ವೆ ನಿಲ್ದಾಣದ ಕಟ್ಟಡ ಪಾರಂಪರಿಕ ಕಟ್ಟಡಗಳ ಸಾಲಿನಲ್ಲಿ ಸೇರಿದೆ. ಕಟ್ಟಡದ ಪಾರಂಪರಿಕತೆಗೆ ಧಕ್ಕೆ ಆಗುವ ರೀತಿನಲ್ಲಿ ಕಾಮಗಾರಿ ನಡೆಸಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಚಾರದಲ್ಲಿ ನಮ್ಮದು ಯಾವುದೇ ತಕರಾರು ಇಲ್ಲ. ಆದರೆ, ಕಟ್ಟಡ ನವೀಕರಣ ಮಾಡುವ ಸಂದರ್ಭದಲ್ಲಿ ಪಾರಂಪರಿಕ ಕಟ್ಟಡಗಳ ಕಾಯ್ದೆ ಪ್ರಕಾರ ನಡೆದುಕೊಳ್ಳಬೇಕಾಗಿದೆ. ಆದರೆ ಇಲ್ಲಿ ಆ ರೀತಿ ನಡೆದುಕೊಳ್ಳಲಿಲ್ಲ. ಈ ಬಗ್ಗೆ ನಮ್ಮ ಅಧಿಕಾರಿಗಳು ಎಚ್ಚರಿಸಿದ್ದರೂ ಆ ರೀತಿ ನಡೆದುಕೊಂಡಿಲ್ಲ. ನಾವು ಮುನ್ಸಿಪಲ್ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಬಹುದು. ಆದರೆ ಸದ್ಯ ಆ ರೀತಿ ಮಾಡುತ್ತಿಲ್ಲ. ಇದೇ ರೀತಿ ಮುಂದೆ ಮೈಸೂರಿನಲ್ಲಿ ಆ ಪಾರಂಪರಿಕ ಕಟ್ಟಡಗಳಿಗೂ ಇದೇ ಪರಿಸ್ಥಿತಿ ಬರಬಹುದು, ಹೀಗಾಗಿ ಎಚ್ಚರಿಸಲಾಗಿದೆ. ಸದ್ಯ ನಾನು ಈ ವಿಚಾರವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರುತ್ತೇನೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತಾ ಸಚಿವ ಸಾರಾ ಮಹೇಶ್ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv