ಭಕ್ತಿ ಪರಾಕಾಷ್ಠೆಯ ಶ್ರೀ ಸಾಂತೇರಿ ದೇವಿ ಜಾತ್ರೆ

ಕಾರವಾರ: ತಾಲೂಕಿನ ಹಣಕೋಣದ ಶ್ರೀ ಸಾಂತೇರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಉತ್ಸವದ ಎರಡನೇ ದಿನವಾದ ಮಂಗಳವಾರ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀ ದೇವಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು.
ಧಾರ್ಮಿಕ ಹಾಗು ಪೌರಾಣಿಕ ವಿಶೇಷತೆಗಳಿಂದ ಕೂಡಿದ ಶ್ರೀ ಸಾಂತೇರಿ ದೇವಿಯ ಮಹಿಮೆ ಅಪಾರ ಎಂದೇ ಹೇಳಲಾಗುತ್ತದೆ. ಒಂದಾನೊಂದು ಕಾಲದಲ್ಲಿ ಪ್ರತ್ಯಕ್ಷ ದೇವತೆಯಾಗಿದ್ದ ಸಾಂತೇರಿ ದೇವಿ, ದುರುಳರ ದುರ್ವರ್ತನೆಯಿಂದ ತಪ್ಪಿಸಿಕೊಳ್ಳಲು ಬಾವಿಗೆ ಹಾರಿದ್ದಳು. ಅದೇ ಬಾವಿಯಲ್ಲಿ ಗುಪೀತಳಾದಳೆಂಬ ಕಥೆಯನ್ನು ಈಗಲೂ ಅಲ್ಲಿನ ಗ್ರಾಮಸ್ಥರು ಹೇಳುತ್ತಾರೆ.
ವರ್ಷಕ್ಕೆ ಏಳು ದಿನ‌ ಮಾತ್ರ ತೆರೆಯುವ ಈ ದೇವಾಲಯದ ಬಾಗಿಲು, ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬ ನಂಬಿಕೆ ಈಗಲೂ ಸ್ಥಳೀಯರಲ್ಲಿದೆ. ಏಳು ದಿನಗಳ ಕಾಲ‌ ನಡೆಯುವ ಶ್ರೀ ಸಾಂತೇರಿ ದೇವಿಯ ವಾರ್ಷಿಕ ಉತ್ಸವಕ್ಕೆ ಲಕ್ಷಗಟ್ಟಲೇ ಭಕ್ತರು ಆಗಮಿಸಿ, ಸೇವೆ ಸಮರ್ಪಿಸುತ್ತಾರೆ. ಹಣ್ಣು ಕಾಯಿಯ ಜೊತೆಯಲ್ಲಿ ಶ್ರೀದೇವಿಗೆ ಉಡಿ ಅರ್ಪಿಸುತ್ತಾರೆ. ಉತ್ಸವದ ದಿನದಂದು ಹರಕೆ ಹೊತ್ತುಕೊಂಡವರು ಅನ್ನ ಸಂತರ್ಪಣೆ ಕಾರ್ಯ ಮಾಡುತ್ತಾರೆ. ಈ ದೇವಸ್ಥಾನದ ಗರ್ಭಗುಡಿ ಬಾಗಿಲು ಸೆ. 22 ರಂದು ಮುಚ್ಚುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv