ನಟರಿಂದ ‘ಬಂಗಾರದ ಮನುಷ್ಯ’ನ ಗುಣಗಾನ..!

ಇಂದು ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್​ಕುಮಾರ್​ರವರ 91ನೇ ವರ್ಷದ ಜನ್ಮದಿನ. ದಿಗ್ಗಜ ನಟನನ್ನು ಸ್ಮರಿಸಿ ಕನ್ನಡ ಸಿನಿರಂಗದ ತಾರೆಯರು, ಗಣ್ಯರು, ರಾಜಕೀಯ ಮುಖಂಡರು ರಾಜ್​ರನ್ನು ಗುಣಗಾನ ಮಾಡುತ್ತಿದ್ದಾರೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಿಷಬ್ ಶೆಟ್ಟಿ ಅಣ್ಣಾವ್ರನ್ನು ನೆನೆದು ಟ್ವೀಟ್ ಮೂಲಕ ಅಭಿಮಾನ ತೋರಿದ್ದಾರೆ.

‘ಗಣಿ’ ಯೋಗಕ್ಕೆ ರಾಜ್​ ಸ್ಫೂರ್ತಿ..!
ನಾಡು ಕಂಡ ಶ್ರೇಷ್ಟ ನಟರಲ್ಲಿ ಡಾ.ರಾಜ್​ಕುಮಾರ್ ಕೂಡ ಒಬ್ರು. ಅಂತಹ ಕರ್ನಾಟಕ ರತ್ನ ಸರಳ, ಸೌಜನ್ಯದ ಚಿಲುಮೆ, ಪರಿಪೂರ್ಣ ವ್ಯಕ್ತಿತ್ವದ ಗಣಿ, ನನ್ನ ಯೋಗ ಕಲಿಕೆಗೆ ಸ್ಫೂರ್ತಿದಾಯಕವಾದ ಡಾ.ರಾಜ್​ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಪ್ರೀತಿ, ಆಶೀರ್ವಾದ ಸದಾ ನಮ್ಮೊಂದಿಗಿರಲಿ ಅಂತಾ ಟ್ವೀಟ್​ನಲ್ಲಿ ಬರೆದುಕೊಂಡು ರಾಜಣ್ಣನ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.

ಕನ್ನಡ ಬೆಳ್ಳಿತೆರೆಯ ದೇವರು!
ಇನ್ನು, ನಟ ರಿಷಬ್ ಶೆಟ್ಟಿ ಕೂಡ ಮನದಾಳದಿಂದ ಶುಭಕೋರಿದ್ದು ನೀವು ಹತ್ತಿನಿಂತು ಬಾವುಟ ನೆಟ್ಟ ಪರ್ವತದ ಕೆಳಗಿನಿಂದ ನಿಮ್ಮನ್ನು ನೋಡುತ್ತ ಬೆಳೆದವರು ನಾವು. ಕನ್ನಡದ ಜನಪದವೇ ಆಗಿ ಹೋಗಿರುವ ನಿಮ್ಮ ಚಲನಚಿತ್ರಗಳನ್ನು ಬೆರಗುಗಣ್ಣಿಂದ ನೋಡುತ್ತ ಬೆಳೆದವರು . ಕನ್ನಡದ ಬೆಳ್ಳಿತೆರೆಯ ದೇವರಾಗಿ ನಿಂತಿರುವ ನಿಮ್ಮ ನೆನಪು ನಮಗೆ ಬಲ ಅಂತಾ ಕನ್ನಡ ಚಿತ್ರರಂಗಕ್ಕೆ ರಾಜ್ ಕೊಡುಗೆ ಏನು ಅನ್ನೋದನ್ನು ಅಭಿಮಾನದಿಂದ ತೋರಿಸಿದ್ದಾರೆ.