‘ಸಲಗ’ ಟೀಮ್​ಗೆ ‘ಪವರ್‌’ಫುಲ್‌ ಬೆಂಬಲ!

ದುನಿಯಾ ವಿಜಯ್.. ಸ್ಯಾಂಡಲ್​ವುಡ್​ನ​ ಮಾಸ್ ಹೀರೋ. ಕಟ್ಟು ಮಸ್ತದ ದೇಹ, ರಿಯಲ್​ ಸ್ಟಂಟ್ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರೋ ವಿಜಿ ‘ಸಲಗ’ ಚಿತ್ರದ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡ್ತಿದ್ದಾರೆ. ಟೈಟಲ್​ ಹಾಗೂ ಟೀಸರ್​​ನಿಂದಲೇ ಭಾರೀ ಸದ್ದು ಮಾಡಿದ್ದ ಚಿತ್ರಕ್ಕೆ ಈಗಾಗಲೇ ಟಗರು ಟೀಮ್ ಸೇರ್ಪಡೆಯಾಗಿ ‘ಸಲಗ’ಕ್ಕೆ ಮತ್ತಷ್ಟು ಬಲ ನೀಡಿತ್ತು. ಮೊದಲ ಬಾರಿ ಸಲಗ ವನ್ನು ಮುನ್ನಡೆಸಲು ನಿರ್ದೇಶಕನ ಹೊಣೆ ಹೊತ್ತಿರೋ ವಿಜಿಗೆ ಕಿಚ್ಚ ಸುದೀಪ್ ಸೇರಿದಂತೆ ಹಲವು ತಾರೆಯರು ತುಂಬಾನೇ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇದೀಗ ಚಿತ್ರತಂಡಕ್ಕೆ ‘ಪವರ್ ಸ್ಟಾರ್’ ಸಾಥ್ ಸಿಕ್ಕಿದೆ.

ವಿಜಿ ನಿರ್ದೇಶನಕ್ಕೆ ಅಪ್ಪು ಮೆಚ್ಚುಗೆ..!
ಹೌದು ದುನಿಯಾ ವಿಜಿ ನಿರ್ದೇಶಕ ಹಾಗೂ ನಾಯಕನಾಗಿ ನಟಿಸ್ತಿರೋ ಸಿನಿಮಾದ ಶೂಟಿಂಗ್​​ಗೆ ಇನ್ನೇನು ಕೆಲದಿನಗಳಷ್ಟೆ ಬಾಕಿ ಇದೆ. ಮೊನ್ನೆಯಷ್ಟೇ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆಸಿದ್ದ ಚಿತ್ರತಂಡ ಶೂಟಿಂಗ್​ಗೆ ಭರ್ಜರಿ ಪ್ಲಾನ್ ರೂಪಿಸುತ್ತಿದೆ. ಈ ನಡುವೆ ಪುನೀತ್​ ರಾಜ್ ಕುಮಾರ್ ಅವರನ್ನ ಸಲಗ ಚಿತ್ರತಂಡ ಭೇಟಿ ಮಾಡಿದೆ. ದುನಿಯಾ ವಿಜಯ್, ನಿರ್ಮಾಪಕ ಶ್ರೀಕಾಂತ್, ಮಾಸ್ತಿ ಮಂಜು ಸೇರಿದಂತೆ ಹಲವರ ಜೊತೆ ಮಾತುಕತೆ ನಡೆಸಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ನಿರ್ದೇಶಕನಾಗಿ ಹೊಸ ಪ್ರಯತ್ನಕ್ಕೆ ಮುಂದಾಗಿರೋ ವಿಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಪಕ್ಕಾ ಅಂಡರ್​ವಲ್ಡ್​​ ಕತೆಯನ್ನು ಹೊಂದಿರೋ ಸಿನಿಮಾವಾಗಿದ್ದು ಚಿತ್ರಕ್ಕೆ ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದಾರೆ. ಇನ್ನು ಚಿತ್ರದಲ್ಲಿ ಟಗರು ಟೀಮ್ ಸೇರಿದಂತೆ ದೊಡ್ಡ ತಾರಾಗಣವಿದ್ದು ವಿಲನ್ ರೋಲ್​ನಲ್ಲಿ ಡಾಲಿ ಧನಂಜಯ, ಕಾಕ್ರೋಚ್ ಖ್ಯಾತಿಯ ಸುದೀಂದ್ರ ಸೇರಿದಂತೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಜೂನ್.6 ರಿಂದ ಶುರುವಾಗುವ ನಿರೀಕ್ಷೆ ಯಿದ್ದು ಚಿತ್ರಕ್ಕೆ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಲಿದ್ದಾರೆ.