ರಾಷ್ಟ್ರೀಯ ಭದ್ರತೆ ಹೆಸರಲ್ಲಿ ಇಂದು ಚುನಾವಣೆಗೆ ಬರ್ತಿದ್ದಾರೆ -ಎಸ್.ಆರ್.ಹಿರೇಮಠ್

ಬಳ್ಳಾರಿ: ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಹಾಗೂ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ ಅಂತಾ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್  ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಚೇ ದಿನ್ ಬರ್ಲಿಲ್ಲ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಲೇ ಇಲ್ಲ. ನ ಖಾವುಂಗಾ, ಖಾನೆ ನ ದುಂಗಾ ಅಂದ್ರೂ, ಆದರೆ ಇವ್ಯಾವು ಕೂಡ ಜಾರಿಯಾಗಲೇ ಇಲ್ಲ. ಉದ್ಯೋಗ ಸೃಷ್ಟಿ, ಮತ್ತು ಕಪ್ಪು ಹಣದ ಕಥೆ ಏನಾಯಿತು. ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಷ್ಟ್ರೀಯ ಭದ್ರತೆಯ ಹೆಸರಲ್ಲಿ ಇಂದು ಚುನಾವಣೆಗೆ ಬರ್ತಿದ್ದಾರೆ. ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಜೂನ್ 29, 30 ರಂದು ಹೋರಾಟ ಪ್ರಾರಂಭ ಮಾಡ್ತೇವೆ ಅಂತಾ ಹೇಳಿದ್ರು.

ಇದೇ ವೇಳೆ, ಅಕ್ರಮ ಗಣಿಗಾರಿಕೆ ವಿಚಾರವಾಗಿ ಮಾತನಾಡಿದ ಎಸ್.ಆರ್.ಹಿರೇಮಠ್, ರೆಡ್ಡಿ ಸಹೋದರರು ಹಾಗೂ ಸಹಚರರು, ಅಕ್ರಮ ಗಣಿಗಾರಿಕೆ ಮಾಡಿದ್ದಾರೆ. ಎಎಂಸಿ ಮೈನಿಂಗ್ ಕಂಪನಿಯ ಅಕ್ರಮ ವಿಚಾರವಾಗಿ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಶ್ರೀಮತಿ ಅರುಣಾ ಲಕ್ಷ್ಮೀ ರೆಡ್ಡಿಗೆ ನೋಟಿಸ್ ನೀಡಿದೆ.
ಅವರು ಖುಲಾಸೆಗೆ ಅರ್ಜಿ ಸಲ್ಲಿಸಿದ್ದರು. ಇದರ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ ಹೈ ಕೋರ್ಟ್ ಗೆ ಅಪೀಲು ಅರ್ಜಿ ಹಾಕಿತ್ತು. ಅವರ ವಿರುದ್ಧ ವಿಚಾರಣೆ ನಡೆಸಲು ದೂರು ದಾಖಲಿಸಬಹುದೆಂದು ಕೋರ್ಟ್ ಹೇಳಿದೆ. ಇದರ ನಿಮಿತ್ತ ಅರುಣಾ ಲಕ್ಷ್ಮೀ ರೆಡ್ಡಿಗೆ ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿ ಕೋರ್ಟ್ ನಮ್ಮ ಮನವಿ ಪುರಸ್ಕರಿಸಿದೆ ಅಂತಾ ಹೇಳಿದರು.