ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ, ಮಣ್ಣು ಪಾಲಾಯ್ತಾ ಆರ್‌ಟಿಇ ಅಸಲಿ ಉದ್ದೇಶ..!?

ಬೆಂಗಳೂರು: ರೈಟ್‌ ಟು ಎಜ್ಯುಕೇಶನ್‌. ಸರ್ಕಾರ ಈ ಕಾಯ್ದೆ ತಂದಿದ್ದೇ ಪ್ರೈವೇಟ್ ಸ್ಕೂಲ್​​​ನಲ್ಲಿ ಬಡಮಕ್ಕಳು ಶಿಕ್ಷಣ ಪಡೆಯಲಿ ಅಂತಾ. ಆದ್ರೆ ಕೇಂದ್ರ ಸರ್ಕಾರ ತಂದಿದ್ದ ಆರ್‌ಟಿಇ ಆ್ಯಕ್ಟ್‌ಗೆ ರಾಜ್ಯ ಸರ್ಕಾರ ಮಾಡಿರೋ ತಿದ್ದುಪಡಿ ಅದ್ರ ಅಸಲಿ ಉದ್ದೇಶವನ್ನೇ ಬದಲಿಸಿ ಬಿಟ್ಟಿದೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿವೆ. ಸರ್ಕಾರಿ ಶಾಲೆಗಳನ್ನ ಉಳಿಸೋ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಆರ್​ಟಿಇ ಅಡಿಯಲ್ಲಿ ಹಾಕಲಾಗಿರೋ ಅರ್ಜಿಗಳ ಅನುಸಾರ ಪ್ರಥಮ ಆದ್ಯತೆ ಸರ್ಕಾರಿ ಶಾಲೆಗಳಿಗೇ ನೀಡಬೇಕು, ನಂತರ ಸೀಟುಗಳು ಮಿಕ್ಕಿದರೆ ಖಾಸಗಿ ಶಾಲೆಗೆ ಪರಿಗಣಿಸಬಹುದು ಅಂತಾ  ಈ ಕಾಯ್ದೆಗೆ ತಿದ್ದುಪಡಿ ತಂದಿದೆ ಎನ್ನಲಾಗ್ತಿದ್ದು, ಇದ್ರಿಂದ ಆರ್‌ಟಿಇ ಅರ್ಜಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಪರಿಣಾಮ ಈ ಬಾರಿ ಪೋಷಕರು ಆರ್‌ಟಿಇ ಬಗ್ಗೆ ಅಷ್ಟು ಆಸಕ್ತಿಯನ್ನೇ ತೋರಿಸಿಲ್ಲ. ಕಾಯ್ದೆ ತಿದ್ದುಪಡಿಯಿಂದ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲ್ಲ ಅನ್ನೋ ಅಳಲು ಪೋಷಕರದ್ದಾಗಿದೆ.

‘‘ಸರ್ಕಾರಿ ಶಾಲೆಗೆ ಇವ್ರು ಅಡ್ಮಿಷನ್‌ ಕೊಡೋದಾದ್ರೆ ಆರ್‌ಟಿಇ ಕೋಟಾ ಉಪಯೋಗ ಏನ್‌ ಹೇಳಿ..? ಗವರ್ನಮೆಂಟ್‌ ಸ್ಕೂಲ್‌ಗೆ ನಾವೇ ಹೋಗಿ ಅಡ್ಮಿಶನ್‌ ಮಾಡ್ಕೋತೀವಿ. ಅದಕ್ಕೆ ಆರ್‌ಟಿಇ ಅರ್ಜಿ ಬೇರೆ ಹಾಕ್ಬೇಕಾ..? ನಮಗೆ ಪ್ರೈವೇಟ್‌ ಶಾಲೆಗಳು ಬೇಕಿತ್ತು. ನಮ್ಮ ಮಕ್ಕಳಿಗೂ ದುಡ್ಡಿರೋರ ಮಕ್ಕಳ ತರಾನೇ ಇಂಗ್ಲಿಷ್​ ಓದಿಸ್ಬೇಕಿತ್ತು. ಆದ್ರೆ ಆ ರೂಲ್ಸು ಈಗ ತಗದ್‌ ಬಿಟ್ಟಿದ್ದಾರಲ್ಲ’’
– ಸತೀಶ್‌ ಎ, ಆಟೋ ಚಾಲಕ

ಅರ್ಜಿ 17,310, ಇರೋ ಸೀಟು 17,784..!
ಬಹುತೇಕ ಏರಿಯಾಗಳಲ್ಲಿ ಸರ್ಕಾರಿ ಶಾಲೆಗಳಿವೆ. ಹೀಗಾಗಿ ಪೋಷಕರು ಆರ್‌ಟಿಇ ಅರ್ಜಿ ಸಲ್ಲಿಸಿದ್ರೂ ಅವ್ರಿಗೆ ಸಿಗೋದು ಸರ್ಕಾರಿ ಶಾಲೆಯೇ. ಹೀಗಾಗಿ ಯಾರೂ ಅರ್ಜಿ ಸಲ್ಲಿಸೋಕೆ ಮುಂದಾಗ್ತಾನೇ ಇಲ್ಲ ಎನ್ನಲಾಗಿದೆ.

‘‘ಜನರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ  ಅಷ್ಟು ಒಲವಿಲ್ಲ. ಹೀಗಾಗಿಯೇ ಪ್ರೈವೇಟ್‌ ಸ್ಕೂಲ್‌ನಲ್ಲಿ ನಮ್ಮ ಮಕ್ಕಳಿಗೂ ಒಳ್ಳೇ ಕ್ವಾಲಿಟಿ ಎಜುಕೇಷನ್‌ ಸಿಗ್ಬೇಕು ಅಂತ ಆಸೆ ಪಡ್ತಾರೆ. ಆರ್‌ಟಿಇ ಮಾಡಿದ್ದೂ ಅದಕ್ಕೆ ತಾನೆ. ಆದ್ರೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ಮೇಲೆ ಅದ್ರ ನಿಜವಾದ ಉದ್ದೇಶವೇ ಸರ್ವ್‌ ಆಗ್ತಿಲ್ಲ. ನೋಡಿ ಲಾಸ್ಟ್‌ ಇಯರ್‌ 2 ಲಕ್ಷದ 38 ಸಾವಿರ ಅಪ್ಲಿಕೇಷನ್‌ ಬಂದಿತ್ತು. ಆದ್ರೆ ಈ ಸಲ ಅರ್ಜಿ ಸಂಖ್ಯೆ 17 ಸಾವಿರ ಗಡಿ ಕೂಡ ದಾಟಿಲ್ಲ. ಈಗಾಗಲೇ ಅಪ್ಲಿಕೇಷನ್‌ ಹಾಕೋ ಡೇಟ್‌ನ 2 ಬಾರಿ ಎಕ್ಸ್‌ಟೆಂಡ್‌ ಮಾಡಿದ್ದಾರೆ. ಆದ್ರೂ ಏನೂ ಪ್ರಯೋಜನ ಇಲ್ಲ. ಅರ್ಜಿ ಹಾಕಿದ್ರೂ ಸಿಗೋದು ಸರ್ಕಾರಿ ಶಾಲೆ ತಾನೆ ಅಂತ ಪೋಷಕರು ಅರ್ಜಿ ಹಾಕೋಕೆ ಮುಂದಾಗ್ತಿಲ್ಲ’’

-ಯೋಗಾನಂದ, ಆರ್​ಟಿಇ ಕಾರ್ಯಕರ್ತ

ಬಡ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಅನ್ನೋ ಆರ್‌ಟಿಇ ಉದ್ದೇಶವೇ ಮೂಲೆ ಸೇರಿದೆ. ಸರ್ಕಾರಿ ಶಾಲೆಗಳನ್ನ ಉಳಿಸೋ ನಿಟ್ಟಿನಲ್ಲಿ ಸರ್ಕಾರ ಬಡ ಮಕ್ಕಳ ಹಿತಾಸಕ್ತಿ ಕೊಂದಿದೆ ಅಂತ ಪೋಷಕರು ಆರೋಪಿಸ್ತಿದ್ದಾರೆ. ರಾಜ್ಯ ಸರ್ಕಾರ ಮಾಡಿರೋ ತಿದ್ದುಪಡಿಯನ್ನ ಈಗಾಗ್ಲೇ ಹೈಕೋರ್ಟ್‌ನಲ್ಲಿ ಚಾಲೆಂಜ್‌ ಮಾಡಿ ಅರ್ಜಿ ಸಲ್ಲಿಸಲಾಗಿದೆ. ಆದ್ರೆ ವಿಚಾರಣೆ ಬಾಕಿ ಇರೋದ್ರಿಂದ ಈ ಬಾರಿಯಂತೂ ಆರ್‌ಟಿಇ ಲಾಭ ಮಕ್ಕಳಿಗೋ ಸಿಗೋ ಸಾಧ್ಯತೆ ಇಲ್ಲ.

ವಿಶೇಷ ವರದಿ: ವಾಸುದೇವ್ ಭಟ್


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv