ವೋಟರ್​ ಐಡಿ ಪತ್ತೆ ಪ್ರಕರಣ; ನಗರ ಪೊಲೀಸ್ ಆಯುಕ್ತರ ವಿರುದ್ಧ ಹೈಕೋರ್ಟ್​ ಗರಂ..!

ಬೆಂಗಳೂರು: ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರದಲ್ಲಿ ವೋಟರ್ ಐಡಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ರಾಕೇಶ್​ ಭದ್ರತೆ ಕೊರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್​ನ ಏಕಸದಸ್ಯ ಪೀಠದಲ್ಲಿ‌ ನಡೆಯಿತು. ವಿಚಾರಣೆಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ಹೊರ ಹಾಕಿದೆ.

ರಾಕೇಶ್​ಗೆ ಭದ್ರತೆ ನೀಡಲು ಹೈಕೋರ್ಟ್ ಆದೇಶಿಸಿ 15 ದಿನಗಳಾದರೂ ಸೂಕ್ತ ಭದ್ರತೆ ನೀಡದ ಹಿನ್ನೆಲೆಯಲ್ಲಿ ಆಯುಕ್ತರ ನಡೆಯನ್ನು ಕ್ಷಮಿಸಲು ಸಾಧ್ಯವಿಲ್ಲ ಅಂತಾ ಗರಂ ಆಗಿದೆ. ಅಲ್ಲದೇ ಮಧ್ಯಾಹ್ನ 1.30 ರೊಳಗೆ ರಾಕೇಶ್​ಗೆ ಭದ್ರತೆ ನೀಡಲು ಮೌಖಿಕ ನಿರ್ದೇಶನ ನೀಡಿದೆ. ಭದ್ರತೆ ನೀಡಿ ವರದಿ ಸಲ್ಲಿಸುವಂತೆ ಪಬ್ಲಿಕ್​ ಪ್ರಾಸಿಕ್ಯೂಟರ್​ಗೂ ಸೂಚನೆ ನೀಡಿದೆ. ಒಂದು ವೇಳೆ ಭದ್ರತೆ ನೀಡುವಲ್ಲಿ ವಿಫಲವಾದರೆ ಆಯುಕ್ತರೇ ವಿಚಾರಣೆಗೆ ಖುದ್ದು ಹಾಜರಾಗುವಂತೆ ಎಚ್ಚರಿಕೆ ನೀಡಿದೆ.

ಪ್ರಕರಣದ ಹಿನ್ನೆಲೆ:
ಜೀವ ‌ಬೆದರಿಕೆ ಹಿನ್ನೆಲೆಯಲ್ಲಿ ದೂರುದಾರ ರಾಕೇಶ್ ಏಪ್ರಿಲ್ 8 ರಂದು ಕೋರ್ಟ್ ಮೊರೆ ಹೋಗಿದ್ದರು. ಭದ್ರತೆ ಕೋರಿ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ‌ ವಿಚಾರಣೆ ನಡೆದಿತ್ತು. ಈ ವೇಳೆ ರಾಕೇಶ್ ಮತ್ತು ಅವರ ಕುಟುಂಬಕ್ಕೆ ಭದ್ರತೆ ನೀಡಲು ಹೈ-ಕೋರ್ಟ್ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿತ್ತು. ಸಶಸ್ತ್ರ ಹೊಂದಿದ ಭದ್ರತಾ ಸಿಬ್ಬಂದಿಯಿಂದ ಭದ್ರತೆ ನೀಡುವಂತೆ ಸೂಚನೆ ನೀಡಿತ್ತು. ಆದ್ರೆ ನಗರ ಪೊಲೀಸ್​ ಆಯುಕ್ತರು ರಾಕೇಶ್​ಗೆ ಭದ್ರತೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಪೊಲೀಸ್​ ಆಯುಕ್ತರ ವಿರುದ್ಧ ಕೋರ್ಟ್ ಗರಂ ಆಗಿದೆ.

ಎಸಿಪಿ ಮೇಲೆ ಜೀವ ಬೆದರಿಕೆ ಆರೋಪ:
ಪ್ರಕರಣ ಸಂಬಂಧ ಯಶವಂತಪುರ ಎಸಿಪಿ ರವಿಪ್ರಸಾದ್ ಮತ್ತು ರೈಟರ್ ಜೀವ ಬೆದರಿಕೆ ಹಾಕಿದ್ದಾರೆ ಅಂತಾ ದೂರುದಾರ ರಾಕೇಶ್​ ಆರೋಪಿಸಿದ್ದಾರೆ. ಸಿಬಿಐ ತನಿಖೆಗೆ ಕೋರಿರುವ ಅರ್ಜಿ ವಾಪಸ್ಸು ಪಡೆಯುವಂತೆ ಎಸಿಪಿ ರವಿಪ್ರಸಾದ್ ಅವರೇ ಖುದ್ದು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಅಂತಾ ಆರೋಪಿಸಿದ್ದಾರೆ. ಮಾರ್ಚ್ 19 ರಂದು ಸಿಟಿ ಸಿವಿಲ್ ಕೋರ್ಟ್ ಶೌಚಾಲಯದಲ್ಲಿ ಜೀವ ಬೆದರಿಕೆ ಹಾಕಿದ್ದರಂತೆ. ‘ನೀನೆ ಸಾಕ್ಷಿಗಳ ಕರೆತರದಿದ್ದರೆ ನಾನ್ ಬೆಲಬಲ್ ಕೇಸ್ ಬೀಳುತ್ತೆ. ಮುನಿರತ್ನ ಸಾಹೇಬ್ರನ್ನ ಹೆದರಿಸುವ ತಾಕತ್ತು ಇದೆಯಾ ನಿಂಗೆ. ಎಂಥೆಂತಾ ಕೇಸ್​ಗಳೆಲ್ಲಾ ಏನೇನೋ ಆಗಿ ಹೋದವು. ಅವರ ಶಕ್ತಿ ಗೊತ್ತಿದ್ದೂ ಇದೆಲ್ಲಾ ಬೇಕೆನೋ ನಿಂಗೆ. ಬಿಬಿಎಂಪಿಯ ಫೈಲ್​ಗಳೆಲ್ಲಾ ಅವರ ಮನೆಲೀ ಸಿಕ್ಕಿದ್ರೂ ಏನೂ ಮಾಡೋಕೆ ಆಗ್ಲಿಲ್ಲ. ಸದ್ಯದಲ್ಲೇ ಮಿನಿಸ್ಟರ್ ಆಗ್ತಾರೆ, ಹೋಂ ಮಿನಿಷ್ಟರ್ ಆಗಬೇಕು ಅಂತಾ ಮಾತಾಡಿದ್ದಾರೆ. ಮುಂದೆ ಹೋಂ ಮಿನಿಷ್ಟರ್ ಆಗಬಹುದು ಅವರನ್ನ ಎದುರು ಹಾಕ್ಕೋಬೇಡ. ಬೀದಿಯಲ್ಲಿ ಹೆಣ ಆಗಿ ಹೋಗ್ತಿಯಾ! ಆಗ ಹೈ ಕೋರ್ಟ್ ಬಂದು ನಿನಗೆ ಪ್ರೊಟೆಕ್ಷನ್ ಕೊಡುತ್ತಾ? ಪ್ರೊಟೆಕ್ಷನ್ ನಾವೇ ಕೊಡ್ಬೇಕು, ಕೇಸೂ ನಾವೇ ಹಾಕ್ಬೇಕು ಯೋಚನೆ ಮಾಡು. ನಿನಗೆ ಹೆಂಡತಿ ಮಗಳು ಇದ್ದಾರೆ. ಇದೆಲ್ಲಾ ಬೇಕಾ? ಹೈ ಕೋರ್ಟ್ ಅಮ್ಮಮ್ಮಾ ಅಂದ್ರೆ ಮೂರು ತಿಂಗಳು ಸಸ್ಪೆಂಡ್ ಮಾಡಬಹುದು ಅಷ್ಟೇ. ಆಮೇಲೆ ನೀನು ನನ್ನ ಕೈಗೆ ಸೀಗಲ್ವಾ? ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಕೇಶ್ ಆರೋಪಿಸಿದ್ದರು. ನಂತರ ಈ ಸಂಬಂಧ ನಗರ ಪೊಲೀಸ್ ಆಯುಕ್ತ ದೂರು‌ ನೀಡಿದ್ದರು. ಆದ್ರೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಯಾವುದೇ ‌ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಭದ್ರತೆ ‌ಕೋರಿ ಹೈಕೋರ್ಟ್ ‌ಮೇಟ್ಟಿಲೇರಿದ್ದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv