‘ಈ ಸಲ ಮ್ಯಾಚ್ ನಮ್ದೇ’ ಅಂದ್ರು ಆರ್​ಸಿಬಿ ಬಾಯ್ಸ್​

ಮೊಹಾಲಿ: ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್​ ಚಾಲೆಂಜರ್ಸ್ ​ಬೆಂಗಳೂರು ತಂಡ ತನ್ನ ಏಳನೇ ಪಂದ್ಯದಲ್ಲಿ ಕೊನೆಗೂ ಗೆಲುವು ದಕ್ಕಿಸಿಕೊಂಡಿದೆ. ಮೊಹಾಲಿಯ ಬಿಂದ್ರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್​ ಜೊತೆಗಿನ ಕದನದಲ್ಲಿ ಆರ್​ಸಿಬಿ 8 ವಿಕೆಟ್​ಗಳ ಜಯ ಸಾಧಿಸಿದೆ. ಈ ಮೂಲಕ ಈ ಸಲ ಕಪ್​ ನಮ್ದೇ ಅನ್ನೋ ಸ್ಲೋಗನ್​ಗೆ ಮರುಜೀವ ಸಿಕ್ಕಿದೆ

ಗೇಲ್ ಅಬ್ಬರದ ಬ್ಯಾಟಿಂಗ್ ವ್ಯರ್ಥ

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಪಂಜಾಬ್​ ಆರ್​ಸಿಬಿ ಬೌಲರ್ಸ್​ಗಳ ಬೆವರಿಳಿಸಿದ್ರು. ಕನ್ನಡಿಗ ಕೆ.ಎಲ್​.ರಾಹುಲ್ ಜೊತೆ ಕ್ರೀಸ್​ಗೆ ಇಳಿದ ವಿಂಡೀಸ್ ದೈತ್ಯ ಗೇಲ್ 64 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಜೊತೆ 99 ರನ್ ಗಳಿಸಿ ಅಜೇಯರಾಗಿ ಉಳಿದು, ಕೇವಲ 1 ರನ್​ನಿಂದ ಶತಕ ವಂಚಿತರಾದ್ರು. ಗೇಲ್​ ಭರ್ಜರಿ ಬ್ಯಾಟಿಂಗ್​ನಿಂದಾಗಿ ಕಿಂಗ್ಸ್​ ಇಲೆವೆನ್​ ಪಂಜಾಬ್ 20 ಓವರ್​ಗಳಲ್ಲಿ 4 ವಿಕೆಟ್​​ ನಷ್ಟಕ್ಕೆ 173 ರನ್​ಗಳ ಉತ್ತಮ ಮೊತ್ತ ಪೇರಿಸಿತು. ಇನ್ನು, ನಾಲ್ಕು ಓವರ್ ಎಸೆದು 33 ರನ್ ನೀಡಿ ಎರಡು ವಿಕೆಟ್​ ಕಿತ್ತ ಯಜ್ವೇಂದ್ರ ಚಹಲ್ ಆರ್​ಸಿಬಿ ಪರ ಯಶಸ್ವಿ ಬೌಲರ್ ಎನಿಸಿದ್ರು

ಎಬಿಡಿ ವಿಲಿಯರ್ಸ್​ ‘ವಿರಾಟ’ರೂಪ

ಉತ್ತಮ ಟಾರ್ಗೆಟ್​ ಮೂಲಕ ಬೆಂಗಳೂರಿಗೆ ಸವಾಲು ಎಸೆದಿದ್ದ ಪಂಜಾಬ್ ತಂಡಕ್ಕೆ ನಿನ್ನೆ ‘ವಿರಾಟ’ ರೂಪದ ದರ್ಶನವಾಯ್ತು. ಆರಂಭಿಕರಾಗಿ ಬಂದ ಪಾರ್ಥೀವ್ ಪಟೇಲ್ ಆರ್​ಸಿಬಿಗೆ ಭರ್ಜರಿ ಓಪನಿಂಗ್​ ನೀಡಿದ್ರು. ನಾಯಕ ವಿರಾಟ್ ಕೊಹ್ಲಿ 67 ರನ್ ಸಿಡಿಸುವ ಮೂಲಕ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ರು. ಗೆಲುವಿಗೆ 46 ರನ್ ಬೇಕಿದ್ದಾಗ ಶಮಿ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದ ಕೊಹ್ಲಿ ಪೆವಿಲಿಯನ್ ಸೇರಿದ್ರು.

ನಂತರ ಕಮ್​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದ ಪಂಜಾಬ್​ಗೆ ಮಿಸ್ಟರ್​ 360 ಎಬಿ ಡಿವಿಲಿಯರ್ಸ್​ ಬೆಂಡೆತ್ತಿದ್ರು. 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಜೇಯ 59 ರನ್ ಬಾರಿಸಿ ತಂಡವನ್ನು ಗೆಲುವಿನ ದಡದತ್ತ ತೆಗೆದುಕೊಂಡು ಹೋದ್ರು. ಡಿವಿಲಿಯರ್ಸ್​ ಜೊತೆಗೂಡಿದ್ದ ಮಾರ್ಕಸ್​ ಸ್ಟಾಯ್​ನಸ್​ ಚಾಣಾಕ್ಷ್ಯ ಬ್ಯಾಟಿಂಗ್​ ಕೂಡ ಆರ್​ಸಿಬಿ ಗೆಲುವಿಗೆ ಕಾರಣವಾಯ್ತು. ಕೊನೆಗೂ ಇನ್ನೂ ನಾಲ್ಕು ಎಸೆತಗಳು ಉಳಿದಿರುವಂತೆಯೇ ಕೊಹ್ಲಿ ಹುಡುಗರು ಈ ಸಲ ಮ್ಯಾಚ್​ ನಮ್ದೇ ಅಂತಾ ಅಭಿಮಾನಿಗಳಿಗೆ ಗೆಲುವಿನ ಪಾನಕ ನೀಡಿದ್ರು.  ಇನ್ನು, ಪಂಜಾಬ್ ಪರ 6 ಜನ ಬೌಲರ್​ಗಳು ಕಣಕ್ಕಿಳಿದರೂ ರವಿಚಂದ್ರನ್ ಅಶ್ವಿನ್ ಹಾಗೂ ಮೊಹಮದ್ ಶಮಿ ತಲಾ ಒಂದು ವಿಕೆಟ್ ಕೀಳುವಲ್ಲಿ ಮಾತ್ರ ಯಶಸ್ವಿಯಾದ್ರು. ಅಬ್ಬರದ ಬ್ಯಾಟಿಂಗ್ ಮಾಡಿದ ಎಬಿಡಿ ವಿಲಿಯರ್ಸ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.